Home / All / Nelidhadi Punya Kshetra

Nelidhadi Punya Kshetra

ನೆಲ್ಲಿದಡಿ ಕ್ಷೇತ್ರದ ವಿಶೇಷತೆಯೇನು?

ಮಂಗಳೂರಿನಿಂದ ಸುಮಾರು 38 ಕಿಲೋಮೀಟರ್ ದೂರವಿರುವ ದಕ್ಷಿಣ ಕರ್ನಾಟಕದ ಪುಣ್ಯ ಕ್ಷೇತ್ರಗಳಲ್ಲೊಂದಾದ ನೆಲ್ಲಿದಡಿ ಕೇತ್ರಕ್ಕೆ 900 ವರ್ಷಗಳ ಇತಿಹಾಸವಿದೆ. ಕಾಂತೇರಿ ಧೂಮಾವತಿ ಇಲ್ಲಿನ ದೈವ. ಸಂತಾನ ಭಾಗ್ಯವಿಲ್ಲದವರು, ಚರ್ಮವ್ಯಾಧಿ ಇನ್ನಿತರ ಅನಾರೋಗ್ಯಗಳಿಂದ ಬಳಲುವವರು ಎಲ್ಲೆಲ್ಲಿಂದಲೋ ಇಲ್ಲಿಗೆ ಪರಿಹಾರ ದೊರಕುತ್ತದೆ ಎಂಬ ವಿಶ್ವಾಸದಲ್ಲಿ ಭೇಟಿ ನೀಡುತ್ತಾರೆ. ವಿಷ ಜಂತು ಕಚ್ಚಿಸಿಕೊಂಡವರಿಗೆ ಈ ಕ್ಷೇತ್ರದ ಆವರಣದಲ್ಲಿರುವ ಬಾವಿಯ ನೀರಿನಿಂದ ಗಂಧ-ಚಂದನ ತೇದು ಪ್ರಸಾದ ಹಚ್ಚಿದರೆ ವಿಷ ಹೊರ ಬಂದು ಗುಣಮುಖರಾಗುತ್ತಾರೆ ಎಂಬ ಪ್ರತೀತಿ ಇದೆ.

ಜೀವಿತಾವಧಿಯಲ್ಲಿ ಅತಿಮಾನುಷ ಶಕ್ತಿ ಪಡೆದು ಮಾಯವಾದಾಗ ದೈವಗಳಾಗಿ ಜನರ ನಂಬಿಕೆಗೆ, ಭಕ್ತಿಗೆ ಪಾತ್ರರಾಗುತ್ತಾರೆ ಎಂಬುದು ಕರಾವಳಿ ಮಂದಿ ಕಂಡುಕೊಂಡ ಸತ್ಯ. ಹೀಗೆ ಮಾಯವಾಗುವ ಮುನ್ನ ದೈವವೊಂದು ನೆಲ್ಲಿದಡಿ ಗುತ್ತಿನ ಮನೆಯ ಯಜಮಾನನಿಗೆ ಚಿನ್ನ- ಬೆಳ್ಳಿ ಕೊಟ್ಟರೆ ಕಳ್ಳಕಾಕರು ಕದಿಯುತ್ತಾರೆ. ಭೂಮಿ ಕೊಟ್ಟರೆ ಮಾರಿ ಹೋಗುತ್ತದೆ ಎಂಬ ಕಾರಣಕ್ಕಾಗಿ ಅಮೃತಕಲ್ಲನ್ನು ದಾನವಾಗಿ ನೀಡಿತ್ತು. ಆ ಕಲ್ಲನ್ನು ಬಾವಿಯೊಳಗೆ ಹಾಕಿರುವುದರಿಂದಲೇ ಇಲ್ಲಿ ನೀರಿಗೂ ಬರವಿಲ್ಲ; ಮತ್ತು ಈ ನೀರು ಔಷಧಿಯಾಗಿ ಪರಿವರ್ತಿತವಾಗಿದೆ ಎಂಬುದು ಇಲ್ಲಿನ ಜನರ ನಂಬುಗೆ.

ಇದೇ ರೀತಿ ಈ ಊರಿಗೆ ನೆಲ್ಲಿದಡಿ ಎಂಬ ಹೆಸರು ಬರುವುದಕ್ಕೂ ಒಂದು ಕಥೆಯಿದೆ. ಈ ಊರಿನ ದೈವಕ್ಕೆ ನೇಮ ಮಾಡಬೇಕೆಂದು ಸ್ಥಳ ನಿಗದಿ ಪಡಿಸಲು ತೆಂಗಿನಕಾಯಿ ಹಾರಿಸಿದಾಗ ಅದೊಂದು ನೆಲ್ಲಿ ಮರದ ಹುಲ್ಲಿನ ಪೊದೆಯೊಳಗೆ ಬಿತ್ತು. ಅಲ್ಲಿ ಹೋಗಿ ನೋಡಿದಾಗ ಅಲ್ಲಿ ದನ ಹಾಗೂ ಹುಲಿಯೊಂದು ಮಲಗಿರುವುದನ್ನು ಕಂಡ ಗ್ರಾಮಸ್ಥರು ಈ ಊರಿಗೆ ನೆಲ್ಲಿದಡಿ ಎಂದು ಹೆಸರಿಟ್ಟರಂತೆ. ಇದೆಲ್ಲಾ ಈ ಊರಿನ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಕಥೆ.

ಈಗ ನಾವು ಹೇಳೋಕೆ ಹೊರಟಿರುವುದು ಎಸ್‍ಇಝಡ್ ಅಧಿಕಾರಿಗಳು ಈ ಜಾಗವನ್ನು ಕಬಳಿಸಿದ ಕಥೆ. ಎಸ್‍ಇಝಡ್‍ಗಾಗಿ 2005ರಲ್ಲಿ ಬಜ್ಪೆ ಸುತ್ತಮುತ್ತ 1076 ಎಕರೆ ಭೂಮಿ ಸ್ವಾಧೀನಕ್ಕೆ ನೋಟಿಫಿಕೇಶನ್ ಜಾರಿಯಾಗಿತ್ತು. ಆಗ ಇದಕ್ಕೆ ಆಕ್ಷೇಪಿಸಿದವರು ನೆಲ್ಲಿದಡಿ ಗುತ್ತು ಮನೆಯವರು. ಆದರೆ, ಇವರ ಆಕ್ಷೇಪದ ನಡುವೆಯೂ ಸ್ವಾಧೀನ ಆಗಿಯೇ ಬಿಟ್ಟಿತ್ತು. ಹೀಗೆ ಸ್ವಾಧೀನಪಡಿಸಿಕೊಂಡ ನೆಲ್ಲಿದಡಿ ಗುತ್ತಿಗೆ ಸೇರಿದ 56 ಎಕರೆ ಭೂಮಿಯಲ್ಲಿ ಏಳು ದೈವ ಸಾನಿಧ್ಯವಿದೆ. ಬಜ್ಪೆ ಹಾಗೂ ಸುತ್ತಮುತ್ತಲಿನ ಜನರಿಗೆ ಈ ಪುಣ್ಯ ಸ್ಥಳವೇ ದೈವಸ್ಥಾನ ಹಾಗೂ ದೇವಸ್ಥಾನ.

ಅಧಿಕಾರಿಗಳು ಭೂಮಿ ಸ್ವಾಧೀನಪಡಿಸಿಕೊಂಡರೂ ದೈವದ ಸ್ಥಾನವನ್ನು ಬಿಟ್ಟುಕೊಡಲು ಜನ ತಯಾರಿಲ್ಲ. ಜನರ ಪ್ರತಿಭಟನೆ ಮುಂದುವರಿದಿದೆ. ಇದಕ್ಕಾಗಿ ಅಧಿಕಾರಿಗಳು ಮಾಡಿದ್ದಾದರೂ ಏನು ಗೊತ್ತೇ? ಇಲ್ಲಿನ ಸ್ಥಳೀಯ ಪಂಚಾಯತ್ ಸ್ಥಳೀಯರಿಗಾಗಿ ನಿರ್ಮಿಸಿದ ಕಾಲುದಾರಿಯನ್ನು ಕೆಡವಿ ತಡೆಗೋಡೆಯನ್ನೇ ನಿರ್ಮಿಸಿದೆ. ಇಲ್ಲಿನ ಶಾಲಾ ಮಕ್ಕಳು ಎರಡೂವರೆ ಕಿಲೋಮೀಟರ್ ದೂರದ ಶಾಲೆ ತಲುಪಲು ಹತ್ತರಿಂದ ಹನ್ನೆರಡು ಕಿಲೋಮೀಟರ್ ಕ್ರಮಿಸಬೇಕು. ಅದರಲ್ಲೂ ಆರು ಕಿಲೋಮೀಟರ್
ನಡೆದುಕೊಂಡೇ ಹೋಗಬೇಕು ಎಂದು ಗುತ್ತಿನ ಮನೆಯ ಧನಂಜಯ ಶೆಟ್ಟಿ `ಈನಾಡು ಕನ್ನಡ’ ಜೊತೆಗೆ ಅಸಹಾಯಕತೆ ತೋಡಿದ್ದಾರೆ.

ಅರ್ಧ ಕಿಲೋಮೀಟರ್ ದೂರದ ಆಸ್ಪತ್ರೆಗೆ ಆರೇಳು ಕಿಲೋಮೀಟರ್ ಸುತ್ತ ಬರಬೇಕು. ಒಟ್ಟಿನಲ್ಲಿ ನೆಲ್ಲಿದಡಿಯಲ್ಲಿರುವ 18 ಕುಟುಂಬಗಳನ್ನು ತಡೆಗೋಡೆಯ ಮೂಲಕ ಎಸ್‍ಇಝಡ್ ಅಧಿಕಾರಿಗಳು ದಿಗ್ಬಂಧನಕ್ಕೊಳಪಡಿಸಿದ್ದಾರೆ.

ಹಿಂದೆ ಕಳವಾರಿನಲ್ಲಿರುವ ಬೆಂಕಿನಾಥೇಶ್ವರ ದೇವಸ್ಥಾನವನ್ನು ತೆರವುಗೊಳಿಸಲು ಹೋದ ಅಧಿಕಾರಿಗಳಿಗೆ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದರಿಂದ ಅದಿನ್ನೂ ಸ್ವಾಧೀನಗೊಳ್ಳದೆ ಉಳಿದಿದೆ. ಇದೀಗ ನೆಲ್ಲಿದಡಿ ಗ್ರಾಮದ ಜನರು ಕೂಡಾ ಸರಕಾರ ಕೊಡುವ ಪರಿಹಾರ ಬೇಡ. ನೆಮ್ಮದಿ ಬೇಕು ಎಂದು ವಿನಂತಿ ಮಾಡುತ್ತಿದ್ದಾರೆ. ನಮ್ಮ ದೈವವನ್ನು ಬಿಟ್ಟು ಕೊಡುವುದಿಲ್ಲ ಎಂದು ಪಟ್ಟುಹಿಡಿಯುತ್ತಿದ್ದಾರೆ.

Courtesy: Beauty of Tulunad

About Pavanesh D

Leave a Reply