Home / All / Kural Parbha at Karinjeshwara Temple Bantwal “

Kural Parbha at Karinjeshwara Temple Bantwal “

“ಮಹತೋಭಾರ ಶ್ರೀಕಾರಿಂಜೇಶ್ವರ ದೇವಸ್ಥಾನದ ತೆನೆ-ಹಬ್ಬದ ( ಕುರಲ್-ಪರ್ಬ) ವಿಶೇಷ ಸಂಪ್ರದಾಯ | Kural Parbha at Karinjeshwara Temple Bantwal ”
“ಕಲ್ಲ್’ಡ್ ಇರ್ವೆರ್ ದೇವೆರ್” ಎಂದೇ ತುಳುನಾಡಿನಲ್ಲಿ ಪ್ರಸಿದ್ಧವಾಗಿರುವ ಮಹತೋಭಾರ ಶ್ರೀಕಾರಿಂಜೇಶ್ವರ ದೇವರ ಶ್ರೀಕ್ಷೇತ್ರದ ತೆನೆ-ಹಬ್ಬದ ಸಂಪ್ರದಾಯ ವಿಭಿನ್ನ ಹಾಗೂ ವಿಶಿಷ್ಟ. ಹೆಚ್ಚಿನ ತುಳುನಾಡಿನ ಆರಾಧನಾ ಕ್ಷೇತ್ರಗಳಲ್ಲಿ ಭತ್ತದ ತೆನೆ-ಹಬ್ಬದ ಸಂಪ್ರದಾಯದ ( ಕುರಲ್-ಪರ್ಬದ ) ಆಚರಣೆಗಳಲ್ಲಿ ಕ್ಷೇತ್ರಕ್ಕೆ ಭತ್ತದ ತೆನೆಯನ್ನು ತಂದು ಪೂಜೆ ಸಲ್ಲಿಸುವ ಕ್ರಮಾಚಾರಣೆ ಇದ್ದರೆ ಶ್ರೀಕ್ಷೇತ್ರ ಕಾರಿಂಜದಲ್ಲಿ ಶ್ರೀಕಾರಿಂಜೇಶ್ವರ ದೇವರೇ ಬಲಿಮೂರ್ತಿಯಲ್ಲಿ ಓಲಗರಾಗಿ ಸರ್ವ ಬಿರ್ದಾವಳಿ ಸಹಿತ ಭತ್ತದ ಗದ್ದೆಗೆ ಹೋಗಿ ದೇವರ ಪರಿಚಾರಕರು ಭತ್ತದ ತೆನೆ ಕೊಯ್ದು ತೆನೆ-ಹಬ್ಬ ನಡೆಯುವ ವಿಶೇಷ ವಿಶಿಷ್ಟ ಸಂಪ್ರದಾಯ ಶ್ರೀಕ್ಷೇತ್ರದಲ್ಲಿದೆ.
ಕಟ್ಟೆಪೂಜೆ – ಕಾರಿಂಜ ಕ್ಷೇತ್ರದಿಂದ ಸರ್ವ ಬಿರ್ದಾವಳಿ ಸಹಿತ ಬಲಿಮೂರ್ತಿಯಲ್ಲಿ ಓಲಗರಾದ ಶ್ರೀಕಾರಿಂಜೇಶ್ವರ ಸ್ವಾಮಿಯು ಬೆಟ್ಟ ಇಳಿದು ರಥಬೀದಿಯಾಗಿ ಸುಮಾರು ೯ ಮೈಲು ದೂರದ ಸರಪಾಡಿ ಹಲ್ಲಂಗಾರು ಕಟ್ಟೆಗೆ ಕೊಡ್ಯಮಲೆ ಕಾಡಿನ ಕಾಲುದಾರಿಯಲ್ಲಿ ಹೋಗುತ್ತಾರೆ.ಹೋಗುವ ದಾರಿಯಲ್ಲಿ ದೇವಸ್ಯಕೋಡಿ ಕಟ್ಟೆ, ಶೇಡ್ಮೆ ಕಟ್ಟೆ,ದಂಡೀಬೆಟ್ಟು ಕಟ್ಟೆ,ನಂದೊಟ್ಟು ಕಟ್ಟೆ,ನೀರ್ಲೋಬೆ ಕಟ್ಟೆಗಳಲ್ಲಿ ಪೂಜೆ ಸ್ವೀಕರಿಸಿಕೊಂಡು ಕೊನೆಗೆ ಹಲ್ಲಂಗಾರು ಕಟ್ಟೆಗೆ ತಲುಪುತ್ತಾರೆ.ಆ ನಂತರ ಹಲ್ಲಂಗಾರು ಕಂಬಳ ಗದ್ದೆಯ ನಿರ್ದಿಷ್ಟ ಜಾಗದಲ್ಲಿ ಬೆಳೆದ ಭತ್ತದ ತೆನೆಯನ್ನು ಕೊಯ್ಯುವ ಕಾರ್ಯಕ್ರಮದ ನಂತರ ಭತ್ತದ ತೆನೆಯನ್ನು ಕಟ್ಟೆಯಲ್ಲಿ ಆಸೀನರಾದ ಶ್ರೀಸ್ವಾಮಿಯ ಬಲಿಮೂರ್ತಿಯ ಮುಂಭಾಗದಲ್ಲಿ ಇಡುತ್ತಾರೆ.ದೇವರ ಪರಿಚಾರಕರು,ಸ್ನಾನಾದಿಗಳನ್ನು ಪೂರೈಸಿದ ನಂತರ ಶ್ರೀಕಾರಿಂಜೇಶ್ವರ ದೇವರಿಗೆ ಪೂಜೆ ನಡೆದು ನಂತರ ಪ್ರಸಾದ ವಿತರಣೆ ನಡೆಯುತ್ತದೆ.

ಈ ವಿಶೇಷ ಸಂಪ್ರದಾಯಕ್ಕೆ ಅದರದೇ ಆದ ಮಹತ್ವ ಹಾಗೂ ಹಿನ್ನೆಲೆಯಿದೆ.ಏನೆಂದರೆ ಹಿಂದೊಮ್ಮೆ ಸರಪಾಡಿ ಗ್ರಾಮದ ಈ ಹಲ್ಲಂಗಾರು ಕಂಬಳ ಗದ್ದೆಯಲ್ಲಿ ಬಂಗಾರದ ಭತ್ತದ ತೆನೆ ಆಯಿತಂತೆ.ಆ ನಂತರ ಅದನ್ನು ಯಾರಿಗೆ ಕೊಯ್ದು ಒಪ್ಪಿಸಬೇಕು ಎಂಬ ಬಗ್ಗೆ ಚರ್ಚೆ ಬಂದಾಗ ಕೊನೆಗೆ ಗ್ರಾಮದ ಹಿರಿಯರೊಬ್ಬರು ತಿಳಿಸಿದ ಹಾಗೆ ಯಾವ ದಿಕ್ಕಿಗೆ ತೆನೆ ವಾಲುತ್ತದೆ ಆ ಭಾಗದ ಕ್ಷೇತ್ರದ ದೇವರಿಗೆ ನೀಡುವುದೆಂದು ತೀರ್ಮಾನಿಸಿದರು. @beautyoftulunad
ಆ ಗ್ರಾಮದಲ್ಲಿ ಹತ್ತಿರ ಇದ್ದುದು ಗ್ರಾಮ ದೇವರಾದ ಸರಪಾಡಿ ಶ್ರೀಶರಭೇಶ್ವರ ದೇವರ ಕ್ಷೇತ್ರ ಆದರೆ ಬಂಗಾರದ ತೆನೆಯು ಸೀಮೆಯ ಕ್ಷೇತ್ರವಾದ ಮಹತೋಭಾರ ಶ್ರೀಕಾರಿಂಜೇಶ್ವರ ದೇವಸ್ಥಾನದ ಭಾಗದ ದಿಕ್ಕಿಗೆ ವಾಲಿದ ಕಾರಣ ತೆನೆಯನ್ನು ಕಾರಿಂಜ ಕ್ಷೇತ್ರಕ್ಕೆ ನೀಡುವುದೆಂದು ತೀರ್ಮಾನಿಸಲಾಯಿತಂತೆ. ಬಂಗಾರದ ತೆನೆಯನ್ನು ಕೊಯ್ದ ತಕ್ಷಣ ಪೈರು ಬೆಳೆದ ಜಾಗ ಕಲ್ಲಾಯಿತಂತೆ ಆ ಪ್ರಕಾರ ಅಂದಿನ ಶ್ರೀದೇವರ ಮಾಯಾ-ಚಿತ್ತದ ಪ್ರೇರಣೆ ಇಂದಿಗೂ ಆ ಬಂಗಾರ ತೆನೆ ಬೆಳೆದ ಜಾಗದಿಂದ ತೆನೆಯನ್ನು ತರುವ ಸಂಪ್ರದಾಯ ಅನೂಚಾನವಾಗಿ ನಡೆದುಕೊಂಡು ಬಂದಿದೆ.ಅಂದು ಶ್ರೀದೇವರಿಗೆ ಸಮರ್ಪಿಸಿದ “ಬಂಗಾರದ ತೆನೆ”(ಬಂಗಾರದ ಕುರಲ್) ಶ್ರೀಕಾರಿಂಜ ಕ್ಷೇತ್ರದಲ್ಲಿ ಇಂದಿಗೂ ಇದೆ ಎಂದು ಪ್ರತೀತಿ.
– ಅಭಿಲಾಷ್ ಚೌಟ ಕೊಡಿಪಾಡಿ ಬಾಳಿಕೆ ಸುರತ್ಕಲ್
@beautyoftulunad
…spb…

About Pavanesh D

Leave a Reply