Home / All / Karinjeswari Aati Da Amavase Vishesha

Karinjeswari Aati Da Amavase Vishesha

ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮವಾಸೆ ಯಾಕೆ ವಿಶೇಷ ?

ಅದು ದ್ವಾಪರಯುಗದ ಪರ್ವಕಾಲ. ದುಷ್ಟನೂ ಬಲಿಷ್ಟನೂ ಆದ ದುರ್ಯೋಧನ ಮೋಸದ ದ್ಯೂತವಾಡಿ ಧರ್ಮಬೀರುಗಳಾದ ಪಾಂಡವರನ್ನು ಕಾಡಿಗೆ ಅಟ್ಟಿದ್ದನು. ಕಾಡಿನಲ್ಲಿ ಕಷ್ಟದಿಂದ ಕಾಲ ಕಳೆಯುವಾಗ ತಮ್ಮ ದುರ್ಗತಿಯ ನಿವಾರಣೆಯಾಗಲು ವಿಶೇಷ ದಿನವಾದ ಆಷಾಢ ಮಾಸದ ಅಮವಾಸೆಯ ದಿನ ಪಾಂಡವರು ಶಿವನನ್ನು ಬಗೆಬಗೆಯಾಗಿ ಅರ್ಚಿಸಲು ಮುನ್ನ ದಿನವೇ ಶ್ರೀ ಕ್ಷೇತ್ರ ಕಾರಿಂಜಕ್ಕೆ ಬರುತ್ತಾರೆ.ಆದರೆ ಆ ದಿನಗಳಲ್ಲಿ ಕಾರಿಂಜದಲ್ಲಿ ಹರಿವ ತೋರೆಯಾಗಲಿ, ಮೀಯುವುದಕ್ಕೆ ಕೆರೆಯಾಗಲಿ ಇರಲಿಲ್ಲವಂತೆ. ಜನ ಕಾರಿಂಜವನ್ನು ಗಜರಾಡ್ಗಿರಿ ಎಂದು ಕರೆಯುತ್ತಿದ್ದರಂತೆ. ಅಂತಹ ಹೆಸರು ಬರಲು ಸುಂದರವಾದ ಕಥೆಯೊಂದು ಕ್ಷೇತ್ರ ಪುರಾಣದಲ್ಲಿದೆ. ಚಿಕ್ಕದಾಗಿ ಇಲ್ಲಿ ವಿವರಿಸುತ್ತೇವೆ

ಕಾರಿಂಜ ಅನ್ನುವ ಕ್ಷೇತ್ರ ನಾಲ್ಕು ಯುಗದಲ್ಲೂ ಇತ್ತಂತೆ. ಸತ್ಯಯುಗದಲ್ಲಿ ರುದ್ರಗಿರಿ ಅನ್ನುವ ಸುಂದರವಾದ ಹೆಸರಿಂದ ಭಕ್ತರನ್ನು ಪೊರೆಯುತ್ತಿತ್ತಂತೆ. ಆದರೆ ಕಾಲಮಾನ ತ್ರೆತಾಯುಗಕ್ಕೆ ಜಾರಿಕೊಂಡಾಗ ಗಜಾಸುರ ಅನ್ನುವ ರಕ್ಕಸನ ಆವಾಸ ಸ್ಥಾನವಾಗುತ್ತದೆ ರುದ್ರಗಿರಿ. ಸಜ್ಜನರನ್ನು ಪೀಡಿಸುವುದು, ಮುನಿಗಳಿಗೆ ಹಿಂಸೆ ಕೊಡುವ ರಾಜಧಾನಿಯಾಗುತ್ತದೆ ಕಾರಿಂಜದ ಕಾಡು. ಕೂಳ ರಕ್ಕಸನ ಅಟ್ಟುಳಿಗೆ ಹೆದರಿದ ಜನ ಗಜಾಸುರ ಇರುವ ಪ್ರದೇಶಕ್ಕೆ ರುದ್ರಗಿರಿ ಅನ್ನುವ ಹೆಸರು ಅಳಿದು ಹೋಗಿ ಗಜರಾಡ್ಗಿರಿ ಅನ್ನುವ ಹೆಸರು ಪಡೆದುಕೊಳ್ಳುತ್ತದೆ. ಅದೊಂದು ದಿನ ಗಜಾಸುರನಿಗೆ ಎದುರಾದ ನಾರದ ಮುನಿ ‘ ಹುಲು ಮಾನವರು ಮತ್ತು ಬಡ ಮುನಿಗಳನ್ನು ಪೀಡಿಸುವ ಬದಲು ಸಾಮರ್ಥ್ಯವಿದ್ದರೆ ದೇವಾದಿ ದೇವತೆಗಳನ್ನು ಪೀಡಿಸು. ಮೂರು ಲೋಕಗಳನ್ನು ಕೈವಶದಲ್ಲಿ ಇರಿಸಿಕೊ ‘ ಅನ್ನುವ ಉಪದೇಶದಿಂದ ಪ್ರಭಾವಿತನಾಗಿ ಬ್ರಹ್ಮನನ್ನು ತಪಸ್ಸಿನ ಮೂಲಕ ಮೆಚ್ಚಿಸಿ ಬೇಕುಬೇಕಾದ ವರಗಳನ್ನು ಪಡೆಯುತ್ತಾನೆ. ಮೂರು ಲೋಕಗಳನ್ನು ಜೈಸಿ ತನ್ನ ಕೈವಶದಲ್ಲಿರಿಸುತ್ತಾನೆ. ಧರ್ಮ ದಾರಿ ತಪ್ಪುತ್ತದೆ. ಲೋಕ ನಿಯಮಗಳು ಗಾಳಿಗೆ ತೂರುತ್ತವೆ. ತ್ರಿಲೋಕಗಳು ತಲ್ಲಣಗೊಳ್ಳುತ್ತವೆ. ದೇವಾದಿ ದೇವತೆಗಳೆಲ್ಲ ಸೇರಿ ಆದಿ ಪರಾಶಕ್ತಿಯಾದ ಪಾರ್ವತಿಯನ್ನು ಶರಣು ಹೋದಾಗ ವನದುರ್ಗೆಯಾಗಿ ಬಂದು ಕೂಳ ರಕ್ಕಸರನ್ನು ಕೊಂದು ಲೋಕ ಕಲ್ಯಾಣವನ್ನು ಮಾಡಿ ಕಾರಿಂಜದಲ್ಲಿ ನೆಲೆ ನಿಲ್ಲುತ್ತಾಳೆ. ಆದರೆ ರಕ್ಕಸನಿಂದ ಬಂದ ಗಜರಾಡ್ಗಿರಿ ಅನ್ನುವ ಹೆಸರು ಹಾಗೆಯೇ ಉಳಿದುಕೊಂಡಿತ್ತು.
ಶಿವನ ಪರಮ ಭಕ್ತನಾದ ಭೀಮ ನಿದ್ದೆ ಮಾಡುವ ಸಮಯದಲ್ಲಿ ನಡು ರಾತ್ರಿ ಕಳೆದು ಬೆಳಗಿನ ಜಾವ ಸಮೀಪಿಸುವ ಕಾಲಕ್ಕೆ ಭೀಮನ ಕನಸು ಶಿವ ರೂಪವನ್ನು ತಾಳಿಕೊಂಡಿತ್ತು.’ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನುಕೂಲ ಆಗುವಂತೆ ಕೆರೆಯೊಂದು ನಿರ್ಮಾಣ ಮಾಡುವಂತೆ ಶಿವಾಜ್ನೆಯಾಗುತ್ತದೆ. ಹೀಗೆ ಮಾಡಿದಲ್ಲಿ ನಿನ್ನ ಹೆಸರು ಕಲಿಯುಗದ ಕೊನೆಯವರೆಗೂ ಇಲ್ಲಿ ಶಾಶ್ವತವಾಗಿ ಉಳಿಯುತ್ತದೆ’ ಎಂದು ಹರಸುತ್ತಾನೆ ಪರಮ ಶಿವ

ತನ್ನ ಇಷ್ಟ ದೇವರ ಇಚ್ಛೆಯನ್ನು ಕೇಳಿ ಮುದಗೊಂಡ ಭೀಮ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ತನ್ನ ಗದೆಯಿಂದ ಬೆಟ್ಟದ ತಟಕ್ಕೆ ಬಡಿಯುತ್ತಾನೆ. ಕೆರೆಯಲ್ಲ ದೊಡ್ಡದಾದ ಸರೋವರವೇ ನಿರ್ಮಾಣವಾಗುತ್ತದೆ. ಶಿವ ಮೈದಳೆಯುತ್ತಾನೆ ” ಇನ್ನು ಮುಂದೆ ಗಜರಾಡ್ಗಿರಿಯನ್ನು ಭಕ್ತರು ಭೇಮಶೈಲ ಎಂದು ಕರೆಯಲಿ. ಆಷಾಢ ಮಾಸದ ಅಮವಾಸೆ ಭೀಮನ ಅಮವಾಸೆಯೆಂದು ಲೋಕವಿಕ್ಯಾತಿ ಹೊಂದಲಿ. ಗದೆಯಿಂದ ಮಾಡಿದ ಕೆರೆಗೆ ಗದಾತೀರ್ಥ ಎನ್ನುವ ಹೆಸರಿಂದ ಪ್ರಸಿದ್ಧಿಯನ್ನು ಪಡೆಯಲಿ. ಆಟಿ ಅಮವಾಸೆಯ ಒಂದು ದಿನ ಸಪ್ತಕೋಟಿ ಮಂತ್ರಗಳು ಭೀಮ ಕೂಪದಲ್ಲಿ ಸುಪ್ತವಾಗಿರಲಿ. ಲೋಕದಲ್ಲಿರುವ ಎಲ್ಲ ವನಸ್ಪತಿಗಳ ಗುಣ ಈ ದಿನ ಭೀಮ ಕೂಪದಲ್ಲಿದ್ದುಕೊಂಡು ಆಯುರ್ವೇದ ಗುಣದಿಂದ ತುಂಬಿ ತುಳುಕಲಿ. ಯಾರು ಆಟಿ ಅಮವಾಸೆ ದಿನ ಇಲ್ಲಿ ಸ್ನಾನವನ್ನು ಮಾಡುತ್ತಾರೋ ಅವರ ಜನ್ಮ ಜನ್ಮಾಂತರದ ಪಾಪಗಳು ಈ ಕೂಪದಲ್ಲಿ ಕಳೆದು ಹೋಗಲಿ. ಈ ತೀರ್ಥದಲ್ಲಿ ಶುಭ ದಿನದಂದು ಯಾರು ಸ್ನಾನ ಮಾಡುತ್ತಾರೋ ಅವರಿಗೆ ಯಾವ ರೋಗಗಳೂ ಬಾಧಿಸದಿರಲಿ” ಎಂದು ಶಿವ ಭೀಮನನ್ನು ಹರಸುತ್ತಾನೆ
ಗಜರಾಡ್ಗಿರಿಯಾಗಿದ್ದ ಕಾರಿಂಜ ದ್ವಾಪರಯುಗದಲ್ಲಿ ಭೀಮಶೈಲವಾಗುತ್ತದೆ. ಮುಂದೆ ಕಾರಿಂಜ ಅನ್ನುವ ಹೆಸರು ಹೇಗೆ ಬಂತು ಅನ್ನುವುದನ್ನು ಈಗಾಗಲೇ ಬರೆದಿದ್ದೇವೆ

 

About Pavanesh D

Leave a Reply