Home / All / Hiriyadka Mahathobhara Shri Veerabhadra Swami Temple

Hiriyadka Mahathobhara Shri Veerabhadra Swami Temple

“ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಜೀರ್ಣೋಧ್ಧಾರದ ಸಂಭ್ರಮ” (Hiriyadka Mahathobhara Shri Veerabhadra Swami Temple) :

 

ತೌಳವ ಸೀಮೆಯ ವೀರಭದ್ರ ಆರಾಧನೆಯ ಕ್ಷೇತ್ರಗಳಲ್ಲಿ ಪ್ರಮುಖವಾಗಿ ಗುರುತಿಸಲ್ಪಡುವ ಕ್ಷೇತ್ರ ಹಿರಿಯಡ್ಕ. ತುಳುವರ ಅತ್ಯಂತ ಪ್ರಮುಖ ಪವಿತ್ರ ಆದಿಆಲಡೆಗಳ ಪೈಕಿ ಇದು ಕೂಡ ಒಂದಾಗಿದೆ. ತುಳುವ ಜನಾಂಗದ ಜನರು ಜಾತಿ-ಭೇದವನ್ನು ಮೀರಿ ಆಲಡೆ ಹಾಗೂ ಮೂಲಸ್ಥಾನಗಳಿಗೆ ನಡೆದುಕೊಳ್ಳುತ್ತಾರೆ. ಈ ಆಲಡೆಗಳು ದೈವಗಳ ಸಾಮೂಹಿಕ ಆರಾಧನಾ ಕೇಂದ್ರಗಳಾಗಿರುತ್ತವೆ. “ಬಿರ್ಮೆರ್, ಸಪ್ತ ಸಿರಿಗಳು,ಹಾಗೂ ಕುಮಾರನ” ಆರಾಧನೆಯೊಂದಿಗೆ ಪರಿವಾರ ಶಕ್ತಿಗಳ ಆರಾಧನೆಯೂ ನಡೆಯುತ್ತದೆ.

ಕವತ್ತಾರು, ನಂದಳಿಕೆ, ಪಾಂಗಾಳ, ಬೊಲ್ಯೊಟ್ಟು, ಖಂಡೇವು ಮೊದಲಾದ ಕಡೆ ಈ ರೀತಿಯ ತೌಳವ ಮೂಲ ಪರಂಪರೆಯ ಆದಿ ಆಲಡೆಗಳು ಕಂಡು ಬರುತ್ತವೆ. ವೈದಿಕ ಸಂಸ್ಕ್ರತಿ ತುಳುನಾಡಿಗೆ ಕಾಲಿಡುವ ಪೂರ್ವದಲ್ಲಿ ಇದೊಂದು ಸಂಪೂರ್ಣ ದೈವಾರಾಧನೆಯ ಕೇಂದ್ರವಾಗಿದ್ದು ಆ ನಂತರ ಇಲ್ಲಿ ವೈದಿಕ ದೇವತೆಗಳ ಪ್ರವೇಶವಾಗಿದ್ದಿರಬಹುದೆಂದು ಇತಿಹಾಸಕಾರರ ಅಭಿಪ್ರಾಯ.

ಹಿರಿಯಡ್ಕ ಕ್ಷೇತ್ರದಲ್ಲಿ ಪ್ರಧಾನ ಶಕ್ತಿಯಾಗಿರುವವನು ವೀರಭದ್ರ.ಪರಶಿವನು ತಾಳಿದ ಅನೇಕ ಅವತಾರಗಳಲ್ಲಿ, ಶಿವನ ಪ್ರಮಥ ಗಣಗಳಲ್ಲಿ ವೀರಭದ್ರನ ಅವತಾರ ಸ್ವರೂಪವು ಒಂದು. ನಾಥ ಪಂಥ, ಪಾಶುಪಥ ಪರಂಪರೆಗಳು ಕರಾವಳಿಯಲ್ಲಿ ಶೈವಾರಾಧನೆಯನ್ನು ಪ್ರವರ್ಧಮಾನಕ್ಕೆ ತಂದ ಸಂಧರ್ಭದಲ್ಲಿ ಈ ದೈವಾರಾಧನೆಯ ಕೇಂದ್ರಕ್ಕೆ ವೀರಭದ್ರನ ಪ್ರವೇಶವಾಗಿರಬಹುದು. ಆಳುಪರು ಆಳಿದ ಪ್ರದೇಶಗಳಲ್ಲಿ ಹತ್ತಾರು ವೀರಭದ್ರ ಕ್ಷೇತ್ರಗಳು ತಲೆ ಎತ್ತಿವೆ. ಕೆಳದಿ ಇಕ್ಕೇರಿ ನಾಯಕರ ಅಧಿದೇವತೆ ಈ ವೀರಭದ್ರನಾಗಿರುವ ಕಾರಣ ಅವರ ಆಳ್ವಿಕೆಗೆ ಒಳಪಟ್ಟ ಕಾಲದಲ್ಲಿ ಈ ದೇವಾಲಯಕ್ಕೆ ಹಲವು ಗ್ರಾಮಗಳನ್ನೇ ಉಂಬಳಿ ಬಿಟ್ಟ ಉಲ್ಲೇಖಗಳಿವೆ. ಘಟ್ಟದ ತಪ್ಪಲಿನಲ್ಲಿರುವ ಈ ಶಕ್ತಿ ಸಾನಿಧ್ಯಕ್ಕೆ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ-ಕನ್ನಡ ಸೇರಿದಂತೆ ಏಳು ಜಿಲ್ಲೆಯ ಜನರು ನಡೆದುಕೊಳ್ಳುತ್ತಾರೆ. ಇಲ್ಲಿನ ವಾರ್ಷಿಕ ಜಾತ್ರೆಗೆ ತಪ್ಪದೇ ಹಾಜರಾಗುತ್ತಾರೆ.

ಈ ಕಾರಣೀಕದ ವೀರಭದ್ರ ದೇವರಿಗೆ ಇದೀಗ 26ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಆಲಯ ನಿರ್ಮಾಣಗೊಳ್ಳುತ್ತಿದೆ. ದೇವಾಲಯದ ಜೀರ್ಣೋಧ್ದಾರ ಎಂದ ತಕ್ಷಣ ಎಲ್ಲಾ ಕಡೆ ಕಾಂಕ್ರೀಟಿಕರಣದ ಭರಾಟೆಯನ್ನು ನಾವು ಕಾಣುತ್ತೇವೆ. ಆದರೆ ಹಿರಿಯಡ್ಕದ ವೀರಭದ್ರ ಸ್ವಾಮಿ ದೇವಾಲಯದಲ್ಲಿ ಇದಕ್ಕೆ ಸಂಪೂರ್ಣ ಭಿನ್ನವಾಗಿ ಮೂಲಶೈಲಿಯಲ್ಲೇ ಕೆಂಪುಕಲ್ಲು ಹಾಗೂ ಶಿಲೆಕಲ್ಲುಗಳನ್ನು ಬಳಸಿ ದೇವಾಲಯ ನಿರ್ಮಿಸುತ್ತಿರುವುದು ವಿಶೇಷ. ಬಹಳ ಪ್ರಮುಖವಾಗಿ ಸ್ವಾಗತ ಗೋಪುರ, ನಗಾರಿ ಗೋಪುರಗಳನ್ನು ಬಹಳ ಅಚ್ಚುಕಟ್ಟಾಗಿ ಪ್ರಾಚೀನವಾಗಿ ಕೆಂಪುಕಲ್ಲಿನಲ್ಲೇ ನಿರ್ಮಿಸಿ ಅದರಲ್ಲೇ ಅಲಂಕಾರಿಕ ವಿನ್ಯಾಸಗಳನ್ನು ಮಾಡಿದ್ದಾರೆ. ಇದರ ಜೊತೆ ಜೊತೆಗೆ ಬಹಳ ವಿಶೇಷ ಪ್ರಾಚೀನ ಕಾಷ್ಠಶಿಲ್ಪ ವೈಭವವನ್ನು ಇಲ್ಲಿನ ಹೆಬ್ಬಾಗಿಲಿನ ಮೇಲ್ಭಾಗದಲ್ಲಿ ಕಾಣಬಹುದು ವಿಶೇಷವಾಗಿ ಶಿವಪುರಾಣದಲ್ಲಿ ಬರುವ ಶಿವನ ಹಲವಾರು ಅವತಾರಗಳ ಪೈಕಿ ಆನಂದ ಭೈರವ, ಕಾಲಭೈರವ, ಅಸಿತಾಂಗ ಭೈರವ, ರುರು ಭೈರವ,ಚಂಡ ಭೈರವ, ಕ್ರೋಧ ಭೈರವ, ಉನ್ಮತ್ತ ಭೈರವ, ಭೀಷಣ ಭೈರವ, ಸಂಹಾರ ಭೈರವರುಗಳ ಶಿಲ್ಪಗಳು ಹಾಗೂ ಲಿಂಗೋಧ್ಭವ, ಗಂಗಾವತರಣ,ಪಾರ್ವತಿ ಸ್ವಯಂವರದ ಚಿತ್ರಿಕೆಗಳನ್ನು ದಾರುಶಿಲ್ಪದ ಮುಖಾಂತರ ಭಕ್ತರಿಗೆ ತಿಳಿಸುವ ಕೆಲಸವನ್ನು ಶಿಲ್ಪಕಾರರು ಬಹಳ ಅಧ್ಭುತವಾಗಿ ಮಾಡಿದ್ದಾರೆ. ಶ್ರೀ ಕ್ಷೇತ್ರವನ್ನು ವೀರಭದ್ರನಿಗೆ ಅರ್ಪಿಸಿದ ಕಾರಣ ದೇವಾಲಯದ ದ್ವಾರಬಂಧದಲ್ಲಿ ವೀರಭದ್ರ ಅವತಾರದ ಪ್ರಮುಖ ಘಟ್ಟಗಳಾದ ದಕ್ಷಯಜ್ಞ, ಶಿವನಿಂದನೆಯನ್ನು ಕೇಳಲಾರದೆ ದಾಕ್ಷಾಯಿಣಿ ದೇಹವನ್ನು ಅಗ್ನಿಗೆ ಅರ್ಪಿಸುವ ರೂಪಕ,ಸತಿಯ ಅಗಲುವಿಕೆಯಿಂದ ಶಿವ ಕೋಪೋದ್ರಿಕ್ತನಾಗಿ ವೀರಭದ್ರನನ್ನು ಸೃಷ್ಠಿಸುವ ಈ ಎಲ್ಲಾ ಫಟನೆಗಳ ಸಂಪೂರ್ಣ ವಿವರಣೆ ಇದೆ.

 

ಹಿರಿಯಡ್ಕ ಶ್ರೀ ಕ್ಷೇತ್ರವನ್ನು ವೀರಭದ್ರ ದೇವಾಲಯ ಎಂದು ಗುರುತಿಸಿದರೂ ಇಲ್ಲಿನ ಪ್ರಧಾನ ಶಕ್ತಿ ಆದಿಬೆರ್ಮೆರ್/ಆದಿ ಬ್ರಹ್ಮ. ತುಳುವರ ಆದಿದೇವತೆ, ಆಲಡೆಗಳ ಪ್ರಮುಖ ಅಧಿಷ್ಟಾನ ದೇವತೆಯಾಗಿರುವ ಆದಿ ಬೆರ್ಮೆರ ಅತೀ ದೊಡ್ಡ ಗುಡಿ ಇಲ್ಲಿದೆ.ಈ ಹಿಂದೆ ಶಿಥಿಲಾವಸ್ಥೆಯಲ್ಲಿದ್ದ ಗುಡಿಯನ್ನು ತೆಗೆದು ಸಂಪೂರ್ಣ ಶಿಲಾಮಯದ ಗುಡಿಯನ್ನು ನಿರ್ಮಿಸಿದ್ದಾರೆ. ಅದರ ಹಿಂಭಾಗದಲ್ಲಿ ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲಾ ಕುಟುಂಬಗಳ ಮೂಲನಾಗನ ಸಾನಿಧ್ಯವಿದೆ. ಆದಿ ಬ್ರಹ್ಮರ ಗುಡಿಯಿಂದ ಹೊರಬಂದಂತೆ ನಮಗೆ ವೀರಭದ್ರ ಸ್ವಾಮಿಯ ಗರ್ಭಗುಡಿಯ ಸಂಕೀರ್ಣ ಕಾಣಸಿಗುತ್ತದೆ. ಪ್ರಧಾನ ಗರ್ಭಗುಡಿಯ ಎಡಭಾಗದಲ್ಲಿ ಶ್ರೀಬ್ರಹ್ಮಲಿಂಗೇಶ್ವರ ದೇವರ ಗುಡಿಯಿದೆ.ಅದರ ಪಕ್ಕದಲ್ಲಿ ನಾಗನ ಕಟ್ಟೆ ಹಾಗೂ ಪಾರಿಜಾತ ಕಟ್ಟೆ ಇದೆ. ಗರ್ಭಗುಡಿಯ ಎದುರು ಭಾಗದಲ್ಲಿ ಶ್ರೀದೇವರ ಧ್ವಜಸ್ತಂಭ ಹಾಗೂ ತುಳುವರ ಪ್ರಾಚೀನ ಶೈಲಿಯ ಭೂತರಾಜರ ಮಾನಸ್ತಂಭ/ಮುಂಡಿಗೆ ಇದೆ.

ನೂತನ ಧ್ವಜಸ್ತಂಭ ಹಾಗೂ ತೀರ್ಥ ಪುಷ್ಕರಣಿಯ ನವೀಕರಣದ ಕಾರ್ಯವು ಪ್ರಗತಿಯಲ್ಲಿದೆ. ಇದರೊಂದಿಗೆ ಸಮಗ್ರವಾಗಿ ಕ್ಷೇತ್ರವನ್ನು ನಿರ್ಮಿಸುವ ನಿಟ್ಟಿನಲ್ಲಿ ಎಲ್ಲಾ ಪರಿವಾರ ಶಕ್ತಿಗಳ ಗುಡಿಗಳು ನವೀಕರಣಗೊಳ್ಳುತ್ತಿವೆ. ಇಲ್ಲಿನ ಪರಿವಾರ ಶಕ್ತಿಗಳ ಗುಡಿಗಳೆಂದರೆ ಬ್ರಹ್ಮರನ್ನು ಆದಿಯಿಂದ ಆರಾಧನೆ ಮಾಡಿಕೊಂಡು ಬಂದಂತಹ ಅಡ್ಕತ್ತಾಯರ ಗುಡಿ. ಅದರ ಮುಂಭಾಗದಲ್ಲಿ ಕ್ಷೇತ್ರಪಾಲನ ಸಾನಿಧ್ಯ,ಜಕಿಣಿ ಕಲ್ಲು, ಹಿಂಭಾಗದಲ್ಲಿ ವ್ಯಾಘ್ರಚಾಮುಂಡಿ ದೈವಗಳ ದೈವಸ್ಥಾನ ಇದರ ಪಕ್ಕದಲ್ಲಿ ಗಣಗಳ ಶಾಲೆ ಇದೆ.ಆದಿಬ್ರಹ್ಮರ ಗುಡಿಯ ಮುಂಭಾಗದಲ್ಲಿ ಒಂದು ನೀಚ ದೈವ,ಮತ್ತು ದೇವಾಲಯದ ಒಳಭಾಗದಲ್ಲಿ ಬಬ್ಬರ್ಯ ದೈವದ ಸಾನಿಧ್ಯಗಳಿವೆ. ಇದರೊಂದಿಗೆ ರಾಜಗೋಪುರದಲ್ಲಿ ಶೂಲಪಾಣಿ, ದಂಡಪಾಣಿ
ಗಂಟಕರ್ಣ ಶಕ್ತಿಗಳನ್ನು ಅಧಿಷ್ಟಾನಗೊಳಿಸಿದ್ದಾರೆ. ಇವೆಲ್ಲದರೊಂದಿಗೆ ಹುಣ್ಣಿಮೆಯಂದು ನಡೆಯುವ ಬಹಳ ದೊಡ್ಡ ಸಿರಿ ಜಾತ್ರೆಯನ್ನು ಗಮನಿಸುವಾಗ ಇದೊಂದು ಪ್ರಾಚೀನ ದೈವಾರಾಧನೆಯ ಪ್ರಮುಖ ಕ್ಷೇತ್ರವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.

ಶ್ರೀಕ್ಷೇತ್ರದ ಗರ್ಭಗುಡಿಯಲ್ಲಿ ಪ್ರಧಾನ ದೇವರು ವೀರಭದ್ರನಾದರೆ ಆತನ ಜೊತೆಗೆ ಸಿರಿ ಹಾಗೂ ಕುಮಾರನ ಸಾನಿಧ್ಯವಿದೆ. ವಿಶೇಷವೆಂದರೆ ತುಳುವರ ದೈವಾರಾಧನೆಯಲ್ಲಿ ವಿಶೇಷ, ಬಹಳ ಪ್ರಮುಖ ಮಾನ್ಯತೆ ಪಡೆದಿರುವ ಮೂಲ ಮೈಸಂದಾಯ ದೈವದ ಸಾನಿಧ್ಯವೂ ಗರ್ಭಗುಡಿಯ ಒಳಭಾಗದಲ್ಲಿದೆ. ವೈದಿಕರ ಪ್ರವೇಶದ ನಂತರ ಇಲ್ಲಿ ಶ್ರೀಚಕ್ರ, ಲಕ್ಷ್ಮೀ ನಾರಸಿಂಹ ಸಾಲಿಗ್ರಾಮದ ಆರಾಧನೆ ನಡೆಯುತ್ತಿದೆ. ಗರ್ಭಗುಡಿಯ ಹೊರಭಾಗದಲ್ಲಿ ವೀರಭದ್ರನ ಆಜ್ಞಾವರ್ತಿಗಳಾದ ರುದ್ರಭಯಂಕರ ಶಿವನ ಗಣಗಳ ಆರಾಧನೆ ನಡೆಯುತ್ತದೆ.ಈ ಗಣಗಳ ಉರುಗಳು/ಮೂರ್ತಿಗಳು ಎಂತಹ ಗಂಡೆದೆಯಲ್ಲಿಯೂ ನಡುಕ ಹುಟ್ಟಿಸುವಷ್ಟು ಘೋರರೂಪವನ್ನು ಹೊಂದಿವೆ. ಸಪ್ತ ಸಿರಿಗಳು, ಭೃಂಗಿ, ಶೃಂಗಿ ಜೋಡುನಂದಿ, ಆಕಾಶ ನಂದಿ, ನಂದಿಗೋಣ, ಚಂಡೇಶ, ಕರ್ಣಿಕಾರ, ಧೂಮ್ರಾಕ್ಷ, ದ್ವಿಮುಖೇಶ್ವರ, ಜಲೇಶ್ವರ, ಚಂಡಕ, ತಾರಕ, ಸೋಮೇಶ, ರುದ್ರಕನ್ನಿಕೆ, ಭೀಮೇಶಿ, ದಂಡನಾಯಕ ಮುಂತಾದ ರುದ್ರಗಣಗಳ ಮೂರ್ತಿಗಳನ್ನು ಇಲ್ಲಿ ಕಾಣಬಹುದು. ಇಲ್ಲಿನ ಗಣಗಳಿಗೆ ಕಾಯಿ-ಹುರುಳಿ (ಕುಡುತಾರಾಯಿ)ಸಮರ್ಪಿಸುವ ಹರಕೆ ಅನಾದಿ ಕಾಲದಿಂದಲೂ ಇಲ್ಲಿದೆ.ವಾಡಿಕೆಯಲ್ಲಿ ಇಲ್ಲಿನ ಪ್ರಧಾನ ದೇವರು ವೀರಭದ್ರನಾದರೂ ಕ್ಷೇತ್ರಾಧಿಪತಿ ಶಕ್ತಿ ಬ್ರಹ್ಮರು/ಬೆರ್ಮೆರ್. ಆದಿಬ್ರಹ್ಮರೇ ಇಲ್ಲಿನ ಸಂಚಾಲಕ ಶಕ್ತಿ, ಅವರ ಆರಾಧನೆಗೆ ಇಲ್ಲಿ ಸಾವಿರಾರು ವರ್ಷಗಳ ಇತಿಹಾಸವಿದೆ. ಇಲ್ಲಿನ ಗ್ರಾಮಕ್ಕೂ ಬೆಮ್ಮರಬೊಟ್ಟು/ಬೊಮ್ಮರಬೊಟ್ಟು ಎಂಬ ಹೆಸರಿದೆ. ಅವರ ಅಪ್ಪಣೆ ಇಲ್ಲದೆ ಇಲ್ಲಿ ಯಾವ ಕಾರ್ಯವೂ ನಡೆಯದು. ಇಲ್ಲಿನ ವಾರ್ಷಿಕ ಜಾತ್ರೋತ್ಸವದ ಸಮಯದಲ್ಲಿ ಬಲಿಪೀಠವನ್ನು ಏರಿ ಸಿರಿ ಕುಮಾರ ಸಮೂಹವನ್ನು ಭೇಟಿ ಮಾಡಿಕೊಂಡು ರಥೋತ್ಸವದ ಸೇವೆಯನ್ನು ಪಡೆಯುವ ಬ್ರಹ್ಮರ ವೈಭವವನ್ನು ನೋಡಲು ಎರಡು ಕಣ್ಣು ಸಾಲದು.

ಶ್ರೀ ಕ್ಷೇತ್ರದ ಮಹಾನ್ ಮೂಲಶಕ್ತಿಗಳ ಮಹಿಮೆಯಂತೆ ಮಹತೋಭಾರ ಶ್ರೀಕ್ಷೇತ್ರ ಹಿರಿಯಡ್ಕದ ಜೀರ್ಣೋಧ್ಧಾರ ಕಾರ್ಯವು ಬಹಳ ವೇಗವಾಗಿ ಪ್ರಗತಿಯ ಹಂತದಲ್ಲಿದೆ. ಅಂದುಕೊಂಡ ಕಾರ್ಯಗಳು ಅತ್ಯಂತ ಸಾಂಗವಾಗಿ ಸಾಗುತ್ತಿದೆ. ತಮಗರಿವಿಲ್ಲದಂತೆ ಒಂದೊಂದೇ ಕಾರ್ಯಗಳನ್ನು ಜೋಡಿಸುತ್ತಾ ಜೀರ್ಣೋಧ್ಧಾರ ಸಮಿತಿಯು ಪ್ರತೀಯೊಂದು ಪುನರ್-ನಿರ್ಮಾಣ ಕಾರ್ಯದಲ್ಲಿ ಶ್ರೀಸ್ವಾಮಿಯ ಕಾರಣೀಕದಂತೆ ಜಯದ ಹಾದಿಯಲ್ಲಿ ಮುಂದುವರಿಯುತ್ತಿದ್ದಾರೆ. ಕೋಟ್ಯಾಂತರ ಭಕ್ತವರ್ಗವನ್ನು ಹೊಂದಿರುವ ಶ್ರೀಕ್ಷೇತ್ರ ಹಿರಿಯಡ್ಕದ ಜೀರ್ಣೋಧ್ಧಾರ ಇಡೀ ಗ್ರಾಮದಲ್ಲೇ ಸಂಭ್ರಮದ ಮನೆಮಾಡುವಂತೆ ಮಾಡಿದೆ. ಸೀಮೆ ಕಾಯುವ ದೇವರೇ ಬಾಲಾಲಯದಲ್ಲಿರುವ ಕಾರಣ ಹಿರಿಯಡ್ಕ ಅಸುಪಾಸಿನ ಗ್ರಾಮಗಳಲ್ಲಿ ಯಾವುದೇ ಶುಭ ಸಮಾರಂಭ, ನೇಮ-ನಡಾವಳಿಗಳು ನಡೆಯುತ್ತಿಲ್ಲ. ಪ್ರಾಚೀನ ತೌಳವ ಶೈಲಿಗೆ ಚ್ಯುತಿ ಬರದಂತೆ ಆಧುನಿಕತೆಯನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡು ಬಹಳ ವಿಶೇಷವಾಗಿ ಶ್ರೀ ಕ್ಷೇತ್ರದ ಜೀರ್ಣೋಧ್ಧಾರದ ಕಾರ್ಯಕ್ರಮಗಳು ಮುಂದುವರಿಯುತ್ತಿದೆ. ಅಂದುಕೊಂಡಂತೆ ಶ್ರೀದೇವರ ಪ್ರೇರಣೆಯಂತೆ ಎಲ್ಲಾ ಪ್ರಗತಿ ಕಾರ್ಯಗಳು ನಿರ್ವಿಘ್ನವಾಗಿ ನಡೆದುಹೋದರೆ ಎಪ್ರಿಲ್ ತಿಂಗಳಿನಲ್ಲಿ ಶತಮಾನದ ನಂತರ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶ ಮಹೋತ್ಸವ ಜರುಗಲಿವೆ.

“ಪುಟ್ಟು ನಂದೊಳಿಕೆ, ಬಲಿಪು ಪೆರಿಯಡ್ಕ (ಹಿರಿಯಡ್ಕ) ಅಬತಾರ ಕಬತಾರ ಮಣ್ಣ್’ಡ್ ಧರ್ಮ ತತ್ತ್ಂಡ ದಂಬೆಕಲ್ಲ ನಡೆಟ್ ಕಲ್ಲಪಾಂಪು ಕಡಪೆರೆ ಬುಡಿಯ. (ತುಳುನಾಡ ಸತ್ಯದ ಸಪ್ತ ಸಿರಿಗಳ ಕಟ್ಟಪ್ಪಣೆಯ ನುಡಿ)
ಒರಿ ಬಿರ್ಮೆರ್, ಏಳ್ವೆರ್ ಸಿರಿಕುಲು, ಒರಿ ಸಿರಿ ಕುಮಾರೆ, ಶಿವ ಕುಮಾರೆ ವೀರಭದ್ರನ ಸಾರಮಾನ್ಯ ಭೂತೊಲು,ನೂತ್ರ ಗಂಡಗಣಕುಲು, ಸರ್ವಶಕ್ತಿಲು ಮೆರೆಪಿನ ಸತ್ಯದ ನಡೆ ತುಳುವೆರೆ ಮೂಲದ ಆದಿ ಆಲಡೆ ಪೆರಿಯಡ್ಕದ ಮಣ್ಣ್’ಡ್ ಪುನರುಜ್ಜೀವನದ ಪುಣ್ಯಕಾಲ. ಮಾಯದ ಗೊಂತುಡು ತುಳುನಾಡ ಸಿರಿ ಬಲತಿನ ಪೇರ ಚೀಪೆದ ವಿಷತ ಪರಿಣಾಮದ ಧರ್ಮದ ಆದಿ ಆಲಡೆ ಪೆರಿಯಡ್ಕ (ಹಿರಿಯಡ್ಕ).

ತುಳುವ ಮೂಲತಾನ ಆದಿಆಲಡೆ ಪೆರಿಯಡ್ಕದ ಜೀರ್ಣೋದ್ಧಾರದ ಪುಣ್ಯಕಾಲಡ್ ಪಾಲ್ ಪಡೆದ್ ತುಳುವೆರೆ ಪೂರ್ವಿಕೆರೆ ಆದಿಮೂಲದ ಮಣ್ಣ್ ಪೆರಿಯಡ್ಕದ ಪೊರ್ಲು-ಪೊಲಿಕೆ, ಸತ್ಯೊಲೆನ ಕಾರ್ಣಿಕದ ಮೇಲೊರ್ಮೆನ್ ಲೋಕೋರ್ಮೆ ಪರಪಾಗ.

“ನಮೋ ನಮಃ ಶ್ರೀಬ್ರಹ್ಮಲಿಂಗೇಶ್ವರ ಸಹಿತ ಶಿವಕುಮಾರ ಶ್ರೀವೀರಭದ್ರ”

(ಮಾಹಿತಿ ಆಧಾರ ಶ್ರೀಕಾಂತ್ ಶೆಟ್ಟಿ ಮುಕ್ತ ವಾಹಿನಿ)
 ಅಭಿಲಾಷ್ ಚೌಟ ಕೊಡಿಪಾಡಿ ಬಾಳಿಕೆ, ಸುರತ್ಕಲ್.
(ಶ್ರೀ ಕೊಡಮಣಿತ್ತಾಯ ಮುಕ್ಕಾಲ್ದಿ ಶ್ರೀ ಕ್ಷೇತ್ರ ಮಿಜಾರು) | Courtesy : Beauty of Tulunad

About Pavanesh D

Leave a Reply