Home / All / Guthuda Illu

Guthuda Illu

ತುಳುನಾಡಿನ ಆಡಳಿತ ವ್ಯವಸ್ತೆಯಲ್ಲಿ ಗುತ್ತು ಮನೆಗಳ ಪಾತ್ರ ಅತೀ ಮುಖ್ಯವಾದುದು. ಸಾವಿರಾರು ಎಕರೆಯಷ್ಟು ವಿಶಾಲ ಕೃಷಿ ಬೂಮಿಯನ್ನು ಹೊಂದಿರುತ್ತಿದ್ದ ಈ ಮನೆಗಳು ಮೊದಲು ಜೈನ ವಂಶದವರ ಆಡಂಬೋಲಕ್ಕೆ ವೇದಿಕೆಯಾಗಿತ್ತು ಕಾಲ ಕ್ರಮೇಣ ಈ ಗುತ್ತು ಮನೆಗಳು ಬಂಟ ಸಮುದಾಯದ ವಶಕ್ಕೆ ಬಂದವು ಬಂಟ ಸಮುದಾಯ ತಮ್ಮವೀರೋಚಿತ ಆಡಳಿತದಿಂದಾಗಿ ಗುತ್ತು ಮನೆಗಳ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೇರಿಸಿದ್ದರು. ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಯಲ್ಲಿರುವ ಗುತ್ತುಗಳ ಪೈಕಿ ಒಂದು ಪ್ರಮುಖ ಗುತ್ತು ಕಣಂಜಾರು ಪಟ್ಟದಮನೆ.ಉಡುಪಿಯಿಂದ ಕಾರ್ಕಳಕ್ಕೆ ಸಾಗುವ ಮಾರ್ಗ ಮದ್ಯದಲ್ಲಿ ಬೈಲೂರು ಎಂಬ ಊರು ಸಿಗುತ್ತದೆ. ಇಲ್ಲಿಂದ ಒಂದು ಕವಲು ದಾರಿ ಕಣಂಜಾರಿಗೆ ಸಾಗುತ್ತದೆ. ಕಣಂಜಾರಿನ ಇತಿಹಾಸ ಪ್ರಸಿದ್ದ ಬ್ರಹ್ಮಲಿಂಗೇಶ್ವರ ದೇವಾಲಯದಿಂದ ಅಣತಿ ದೂರದಲ್ಲಿದೆ ಈ ಗತ್ತಿನ ಪಟ್ಟದ ಮನೆ. ಹಸಿರು ಹೊದ್ದ ವಿಶಾಲವಾದ ಬಯಲು ಲೋಕದ ಪರಿವೆಯೇ ಇಲ್ಲದೆ ಸ್ವಚಂದವಾಗಿ ಮೇಯುತ್ತಿರುವ ಗೋವುಗಳು.. ಅದರ ಮುಂಬಾಗದಲ್ಲೇ ತಲೆ ಎತ್ತಿ ಗರ್ವದಿಂದ ನಿಂತು ವೈಭವದ ಶಿಖರ ಚುಂಬಿಸುತ್ತಿರುವ ಕಣಂಜಾರು ಪಟ್ಟದಮನೆ.ಅಧಿಕಾರ ಸಾಮ್ರಾಜ್ಯ..ದೌಲತ್ತು…ಎಲ್ಲವೂ ಅಳಿದಿದೆ ಆದರೆ ಇದರ ಗಾಂಭಿರ್ಯ ಮಾತ್ರ ಇಂದಿಗೂ ಎಳ್ಳಷ್ಠೂ ಮಂಕಾಗಿಲ್ಲ… ವಿಶಲವಾದ ಪ್ರಾಂಗಣ ಗೋಡೆಗೆ ಅಂದದ ಚಿತ್ತಾರ ನೋಡುಗನನ್ನು ಸ್ವಾಗತಿಸಲು ಸನ್ನದ್ಧವಾಗಿ ನಿಂತಿರುವ ಮಹಾದ್ವಾರ ಒಳ ನಡೆಯಬೇಕಾದರೆ ಎಂಥ ಪ್ರಗತಿಪರನಿಗೂ ಒಮ್ಮೆ ಮನಸ್ಸು ಅಳುಕಬೇಕು. ಯಾಕೆಂದರೆ ಇದು ಸತ್ಯಪ್ರಮಾಣಕ್ಕೆ ಹೆಸರಾದ ಪವಿತ್ರ ಕ್ಷೇತ್ರ. ಆ ಸತ್ಯಪ್ರಮಾಣದ ಕಲ್ಲು ಅಲ್ಲೇ ಬಯಲಲ್ಲಿದೆ. ಅದರ ಮೇಲೆ ಆಣೆ ಮಾಡಿ ಸುಳ್ಳು ಹೇಳಿದವರ್ಯಾರೂ ಮನೆ ತಲುಪಿದ ಉದಾಹರಣೆ ಇಲ್ಲ. ಪ್ರವೇಶದ್ವಾರಕ್ಕೆ ಎದುರೇ ಬ್ರಹ್ಮಲಿಂಗೇಶ್ವರನ ಉತ್ಸವ ಮೂರ್ತಿ ವಿರಾಜಮಾನವಾಗುವ ಪವಿತ್ರವಾದ ಕಟ್ಟೆ ಇದೆ. ಪ್ರತಿ ವರ್ಷ ಮಾಗಣೆಗೆ ಒಡೆಯನಾದ ಬ್ರಹ್ಮಲಿಂಗೇಶ್ವರ ಈ ಕಟ್ಟೆಯಲ್ಲಿ ಕುಳಿತು ಪೂಜಾಕೈಂಕರ್ಯವನ್ನು ಪೂರೈಸಿ ಹೋಗುತ್ತಾನೆ. ಆತನ ಮೂಲ ಪೀಠಕ್ಕೆ ಇರುವಷ್ಟೇ ಮಹತ್ವ ಈ ಸ್ಥಳಕ್ಕೂ ಇದೆ. ಪ್ರವೇಶ ದ್ವಾರದ ಕಲಾಕುಸುರಿ ನಿಜಕ್ಕೂ ಅದ್ಭುತ. ಪ್ರವೇಶದ್ವಾರವನ್ನು ದಾಟಿ ಮುಂದೆ ಹೋಗುತ್ತಿದ್ದಂತೆ ನಿಮ್ಮ ಮುಂದೆ ಅನಾವರಣ ಗೊಳ್ಳುತ್ತದೆ ಪ್ರಾಚೀನ ತುಳುನಾಡಿನ ಅರಸೊತ್ತಿಗೆಯ ಅನುಪಮ ಲೋಕ… ಇದು ಅಂತಿಂಥ ಚಾವಡಿಯಲ್ಲ ಸಾವಿರ ವರ್ಷಗಳಿಂದ ಲಕ್ಷಾಂತರವಿವಾದಗಳನ್ನುಕಣ್ಣ ರೆಪ್ಪೆ ಮಿಟುಕಿಸುವಷ್ಟರಲ್ಲೇ ಬಗೆಹರಿಸಿ ನ್ಯಾಯದಾನ ಮಾಡಿದ ಚಾವಡಿ ಅಕ್ಕಪಕ್ಕದ ೧೨ ಮಾಗಣೆಯ ಜನರು ಈ ಚಾವಡಿ ಹತ್ತ ಬೇಕಿದ್ದರೆ ೯ ದಿನದ ವೃತ ಹಿಡಿಯುತ್ತಿದ್ದರಂತೆ. ಇಲ್ಲಿನ ಅರಸರೂ ಅಷ್ಟೇ..ಇಲ್ಲಿನ ಪಟ್ಟ ಏರಿದವನು ಮದುವೆಯಾಗುವಂತಿಲ್ಲ.. ಹೆಣ್ಣಿನ ನೆರಳೂ ಈತನಿಗೆ ಬೀಳ ಕೂಡದು.. ತನ್ನ ಪಟ್ಟದ ಮಂಚ ಬಿಟ್ಟು ಬೇರೆ ಎಲ್ಲೂ ಮಲಗುವಂತಿಲ್ಲ. ಶುದ್ಧ ಸಸ್ಯಾಹಾರ ಸ್ವೀಕರಿಸಬೇಕು. ಜನಿವಾರ ಧಾರಣೆ ಮಾಡಬೇಕು. ಮನೆಯಲ್ಲಿರುವ ದೈವ ದೇವರಿಗೆ ಕ್ರಮಬದ್ಧವಾಗಿ ನಿತ್ಯ ಪೂಜೆ ನಡೆಸಬೇಕು. ಗ್ರಾಮದಲ್ಲಿ ಯಾವುದೇ ರೀತಿಯ ಅನ್ಯಾಯ ಅನಾಚಾರಗಳಿಗೆ ಅವಕಾಶ ಕೊಡುವಂತಿಲ್ಲ..ತಾರತಮ್ಯ ಮಾಡುವಂತಿಲ್ಲ ಒಂದು ವೇಳೆ ಹಾಗಾದರೆ ಅದರ ದೋಷ ನೇರವಾಗಿ ಪಟ್ಟದ ಅರಸನಿಗೆ ತಟ್ಟುತ್ತಿತ್ತು. ಒಟ್ಟಿನಲ್ಲಿ ಇಲ್ಲಿನ ಪಟ್ಟದ ಅಧಿಕಾರವೆನ್ನುವುದು ಕತ್ತಿಯ ಮೇಲಿನ ನಡಿಗೆಯಂತೆ. ಚಾವಡಿಯಲ್ಲಿ ಸುಮಾರು ೫೦೦ ವರ್ಷಗಳಷ್ಟು ಹಳೆಯದಾದ ಪಟ್ಟದ ಮನೆ ಮತ್ತು ಪಟ್ಟದ ಮಂಚವಿದೆ. ಇದರಕುಸುರಿ ಕೆತ್ತನೆಗಳು ಆ ಕಾಲದ ಜನರಲ್ಲಿದ್ದ ಕಲಾನೈಪುಣ್ಯತೆಯನ್ನು ಅನಾವರಣ ಗೊಳಿಸುತ್ತದೆ. ಚಾವಡಿಯ ಬಲಿಷ್ಟ ರಟ್ಟೆಗಳಂತೆ ನಿಂತಿದೆ ನಾಲ್ಕು ಬೋಗಿಕಂಬಗಳು.. ಇವೆಲ್ಲವೂ ಹಳೆಯ ಮನೆಯಿಂದಲೇ ಸಿಕ್ಕಿರುವ ಮರಮಟ್ಟುಗಳು..ಚಾವಡಿಯನ್ನು ದಾಟಿ ಮುಂದಡಿ ಇಡುತ್ತಿದ್ದಂತೆ ಕಾಣುತ್ತದೆ ಇನ್ನೊಂದು ದಾರಂದ… ಇದರಲ್ಲಿದೆ ಸಹಸ್ರದಳ ಕಮಲ ಮತ್ತು ಮಹಾವೀರನ ಕೆತ್ತನೆ. ಸೂರ್ಯನ ಬೆಳೆಕು ನೆರಳಿನಾಟದೊಂದಿಗೆ ಅರಮನೆಯ ಸೌಂದರ್ಯ ಅನುಭವಿಸಲೋ ಎಂಬಂತೆ ಇಲ್ಲಿ ತೆರೆದ ನಡು ಚಾವಡಿ ನಿರ್ಮಿಸಲಾಗಿದೆ. ಹಳೆಯ ಮನೆಯಲ್ಲಿ ಇದು ವಿಶಾಲವಾಗಿತ್ತಂತೆ. ಆದರೆ ಈಗ ಸ್ವಲ್ಪ ಸಣ್ಣದಾಗಿ ನಿರ್ಮಿಸಿದ್ದಾರೆ. ಇದು ತುಳುನಾಡಿನ ಹಳೆಯ ಎಲ್ಲಾ ಮನೆಗಳಲ್ಲಿ ಕಾಣಸಿಗುವ ರಚನೆಯಾಗಿದೆ.ಇಲ್ಲಿನ ಗೋಡೆಗಳ ಮೇಲೆ ಹಳೆಯ ವೈಭವನ್ನು ಸಾರುವ ಹತ್ತಾರು ಕಲಾಕೃತಿಗಳನ್ನು ಅಳವಡಿಸಲಾಗಿದೆ.ಇಲ್ಲಿಂದ ಮೊದಲ ಮಹಡಿಗೆ ಮೆಟ್ಟಿಲುಗಳಿವೆ. ಇದರ ಮೆಟ್ಟಿಲಿನ ಎರಡೂ ಭಾಗಲ್ಲಿರುವ ಪುಟ್ಟ ಕಂಬಗಳ ಸಾಲು ಕಾಷ್ಟಶಿಲ್ಪದ ಒಂದು ಉತ್ಕೃಷ್ಟ ಮಾದರಿಯಂತೆ ಕಾಣುತ್ತದೆ. ಮೇಲ್ಬಾಗದಲ್ಲೂ ಹಲವಾರು ಕೊಠಡಿಗಳಿದ್ದು ಇಲ್ಲಿ ಅರಸರನ್ನು ಹೊತ್ತೊಯ್ಯುತ್ತಿದ್ದ ದಂಡಿಗೆ ಇದೆ. ಈ ದಂಡಿಗೆಗೆ ಇದೀಗ ಸಂಫೂರ್ಣ ವಿಶ್ರಾತಿ. ಹಿಂದೊಮ್ಮೆ ಸಕಲ ಬಿರುದಾವಳಿಗಳೊಂದಿಗೆ ವಾದ್ಯ ಘೊಷ ಸಿಡಿಮದ್ದುಗಳ ಅಬ್ಬರದಲ್ಲಿ ಅರಸರನ್ನು ಹೊತ್ತು ಸಾಗುತ್ತಿದ್ದ ಈ ದಂಡಿಗೆ ಕಳೆದ ಒಂದು ಶತಮಾನದಿಂದ ತನ್ನ ವೈಭವವನ್ನು ಕಳೆದುಕೊಂಡು ಮೂಲೆ ಸೇರಿದೆ. ಈ ಅರಮನೆಗೆ ಸಂಭಂದಿಸಿದ ಪ್ರಾಚೀನ ನಾಗ ಬನವೊಂದು ಇಲ್ಲೇ ಅಣತಿದೂರದಲ್ಲಿದೆ. ಈ ನಾಗಬನದಲ್ಲಿ ಹಲವಾರು ಪ್ರಾಚೀನ ನಾಗನಕಲ್ಲುಗಳಿವೆ.
ಇಲ್ಲಿಂದ ಕೆಲವೇ ದೂರದಲ್ಲಿದೆ. ಈ ಅರಮನೆಯ ಅಧಿಷ್ಠಾನ ಶಕ್ತಿ ಶ್ರೀ ಬ್ರಹ್ಮಲಿಂಗೇಶ್ವರನ ಸಾನಿಧ್ಯ ಅಲ್ಲೆ ಪಕ್ಕದಲ್ಲಿದ್ದಾನೆ ದೈವ ಮೇಲ್ಬಂಟ….. ಬ್ರಹ್ಮಲಿಂಗೇಶ್ವರನ ಆದ್ಯ ಗಣವಾಗಿರುವ ಈತನೇ ಇಡೀ ಅರಮನೆಯ ಕಾರುಬಾರನ್ನು ನೋಡಿಕೊಳ್ಳುವವನು….ಇಂದಿಗೂ ಈತನ ಹೆಸರೆತ್ತಲೂ ಇಡೀ ಗ್ರಾಮ ಹೆದರುತ್ತದೆ. ಬ್ರಹ್ಮಲಿಂಗೇಶ್ವರ ದೇವರ ಎಲ್ಲಾ ಕಾರ್ಯ ಕಲಾಪಗಳು ಈ ಪಟ್ಟದ ಅರಮನೆಯ ಉಸ್ತುವಾರಿಕೆಯಲ್ಲೇ ನಡೆದು ಬಂದಿದೆ. ಉತ್ಸವದ ಸಮಯದಲ್ಲಿ ಪ್ರತಿನಿತ್ಯ ಅರಸರನ್ನು ದೀವಟಿಕೆಯ ಬೆಳಕಿನಲ್ಲಿ ಶ್ವೇತಛತ್ರದ ನೆರಳು ಹಿಡಿದು ಕೊಂಬು ತಮ್ಮಟೆಗಳ ನಾದದೊಂದಿಗೆ ದೇವಾಲಯಕ್ಕೆ ಕರೆತರಲಾಗುತ್ತದೆ. ಅವರನ್ನು ಮತ್ತೆ ಅರಮನೆಗೆ ಬಿಡುವಾಗಲೂ ಇದೇ ಕ್ರಮವನ್ನು ಅನುಸರಿಸಲಾಗುತ್ತದೆ. ಈಗ ಅರಸರು ಅರಸೊತ್ತಿಗೆ ಎಲ್ಲವೂ ಮಾಯವಾಗಿದ್ದರೂ ಕುಟುಂಬದ ಹಿರಿಯರಾಗಿರುವ ಸುಧಿರ್ ಹೆಗ್ಡೆಯವರು ಈ ಮರ್ಯಾದೆಗೆ ಪಾತ್ರರಾಗುತ್ತಾ ಬಂದಿದ್ದಾರೆ. ಧನು ಪೂರ್ಣಿಮೆಗೆ ಇಲ್ಲಿ ಜಾತ್ರೆ ನಡೆಯುತ್ತದೆ.ಈ ಜಾತ್ರಾ ಸದರ್ಭದಲ್ಲಿ ನಡೆಯುವ ಹಲವಾರು ಆಚರಣೆಗಳು ಇತಿಹಾಸದ ಕೆಲವು ರೋಚಕ ಸತ್ಯವನ್ನು ತೆರೆದಿಡುತ್ತವೆ. ದೇವರ ವರಸರೆ ಗದ್ದೆಯಲ್ಲಿ ಎರಡು ಬಣಗಳು ಕೋಲು ಹಿಡಿದು ಬಡಿದಾಡುವ ಕ್ರಮವಿದೆ. ಇದು ಹಿಂದೆ ಇಲ್ಲಿ ನಡೆದಿರಬಹುದಾದ ಐತಿಹಾಸಿಕ ಭಿಕರ ಯುದ್ಧವನ್ನು ನೆನಪಿಸುತ್ತದೆ. ನಂತರ ದೇವರ ಬಲಿ ಮೂರ್ತಿ ಇಲ್ಲಿಗೆ ಆಗಮಿಸುತ್ತದೆ. ಅಲ್ಲಿ ಪೂಜೆ ನಡೆದು ದೇವರು ಯುದ್ದದಲ್ಲಿ ಪಾಲ್ಗೊಂಡ ಎಲ್ಲರನ್ನು ಹರಸುತ್ತಾರೆ. ಬ್ರಹ್ಮಲಿಂಗೇಶ್ವರನಿಗೆ ವೈಭವದ ರಥೋತ್ಸವವೂ ನಡೆಯುತ್ತದೆ. ಮುಂದೆ ಮೇಲ್ಬಂಟನ ಸಾನಿಧ್ಯದಲ್ಲಿ ಗೆಂಡ ಸೇವೆ. ಆತನ ಗಣಗಳಿಗೆ ರಕ್ತಾಹಾರ ಪ್ರಕ್ರಿಯೆಗಳು ನಡೆಯುತ್ತವೆ. ಇದೆಲ್ಲಾ ಕಾರ್ಯಗಳೂ ಕಣಂಜಾರು ಪಟ್ಟದಮನೆಯ ಮೇಲ್ವಿಚರಣೆಯಲ್ಲೇ ನಡೆಯುತ್ತದೆ.
ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿರುವ ಈ ಮನೆತನ ಕಣಂಜಾರು ಬೊಮ್ಮರಬೆಟ್ಟು, ನೀರೆ,ಬೈಲೂರು,ಕೌಡೂರು,ಎಲಿಯಾಲುಮೊದಲಾದ ಸುತ್ತಮುತ್ತಲಿನ ೧೨ ಮಾಗಣೆಗಳನ್ನು ಆಳುತ್ತಿತ್ತು. ಸುಮಾರು ೧೭೦೦ ಎಕರೆ ಭುಮಿ ಈ ಮನೆತನಕ್ಕಿತ್ತು ಎಂದು ಇತಿಹಾಸ ಹೇಳುತ್ತದೆ. ಬಾರ್ಕೂರು ಅಳುಪ ಅರಸರ ಅದೀನದಲ್ಲಿದ್ದ ಈ ಪುಟ್ಟ ಸಂಸ್ಥಾನ ನಂತರ ವೀರಪಾಂಡ್ಯನ ಅದಿಕಾರ ವ್ಯಾಪ್ತಿಗೆ ಒಳಪಟ್ಟಿತ್ತು. ಕಣಂಜಾರು ಅರಸರು ಪರೀಕ ಎರ್ನಾಡು ಬಲ್ಲಾಳರ ಅದೀನ ಅರಸರಾಗಿದ್ದರು. ಕಣಂಜಾರಿನ ಎಲ್ಲಾ ಕಂದಾಯ ಲೆಕ್ಕಾಚಾರಗಳು ಪರೀಕ ಎಲ್ನಾಡು ಅರಸರ ಮೂಲಕ ಬಾರ್ಕೂರು ತಲುಪುತ್ತಿತ್ತು.ವೀರಪಾಂಡ್ಯ ತನ್ನ ಸಾಮ್ರಾಜ್ಯದ ಆಡಳಿತ ಸುವ್ಯವಸ್ತಿತವಾಗಿ ನಡೆಯಬೇಕೆಂದು ರಾಜ್ಯವನ್ನು ೧೨ ವಿಭಾಗ ಮಾಡಿ ಸ್ಥಳಿಯ ಹೆಗ್ಗಡೆಯವರಿಗೆ ಪೂರ್ಣ ಅಧಿಕಾರ ನೀಡಿದನು. ೧೬೯೨ರಲ್ಲಿ ಮೈಸೂರು ಕಂಡ ಪ್ರಸಿದ್ದ ಅರಸರಾದ ಕೃಷ್ಣರಾಜ ಒಡೆಯರ್ ಅವರಿಂದ ಕಣಂಜಾರು ಅರಮನೆಗೆ ಹಗಲು ದೀವಟಿಗೆ, ಶ್ವೇತ ಛತ್ರ ಮತ್ತು ಶ್ವೇತರತ್ನಗಂಬಳಿಯ ಮರ್ಯಾದೆಯನ್ನು ನೀಡಲಾಯಿತು. ಇದು ಕಣಂಜಾರಿನ ಅಂದಿನ ಅರಸರಾಗಿದ್ದ ವೀರ ನಾಯರ್ ಹೆಗ್ಗಡೆಯವರ ಪರಾಕ್ರಮ ಮತ್ತು ಸತ್ಯಸಂಧತೆಯನ್ನು ಗುರುತಿಸಿ ನೀಡಲಾಗಿತ್ತು. ಶ್ವೇತಛತ್ರದ ಮರ್ಯಾದೆ ಆ ಕಾಲದಲ್ಲಿ ಕೇವಲ ಚಕ್ರವರ್ತಿಗೆ ಮಾತ್ರ ಇರುತ್ತಿತ್ತು.ಇವರ ಅವಧಿಯಲ್ಲಿ ನಡೆಯುತ್ತಿದ್ದ ಕಂಬಳಕ್ಕೆ ತನ್ನದೇ ಆದ ಮಹತ್ವವಿತ್ತು. ಇದು ಬ್ರಹ್ಮಲಿಂಗೇಶ್ವರನ ಆರಾಧನೆಯ ಒಂದು ಭಾಗವೂ ಹೌದು. ವೀರ ನಾಯರ್ ಹೆಗ್ಗಡೆ ೧೭೬೨ರಲ್ಲಿ ಮೃತಪಟ್ಟರು ಎನ್ನಲಾಗಿದೆ. ಇವರು ಕಣಂಜಾರನ್ನು ಆಳಿದ ಒಬ್ಬ ಸುಪ್ರಸಿದ್ದ ಅರಸ ತನ್ನ ಕೊನೆಯ ದಿನದವರೆಗೂ ಇವರು ಬ್ರಹ್ಮಚರ್ಯವನ್ನು ಪಾಲಿಸಿದ್ದರು. ಮೈನರೆಯದ ಹೆಣ್ಣುಮಕ್ಕಳು ಮತ್ತು ಮುಟ್ಟು ನಿಂತ ಮಹಿಳೆಯರಿಂದ ಮಾತ್ರ ಇವರು ಆಹಾರ ಸ್ವೀಕರಿಸುತ್ತಿದ್ದರು. ಇವರ ಅವಧಿಯಲ್ಲಿ ಟಿಪ್ಪು ಸುಲ್ತಾನ ಎಂಬ ಮತಾಂಧ ಕರಾವಳಿ ಭಾಗಕ್ಕೆ ದಾಳಿ ಮಾಡಿ ಹಲವಾರು ಮಠಮಂದಿರಗಳನ್ನು ಲೂಟಿ ಮಾಡಿದ್ದ. ಆತನ ದಾಳಿಯನ್ನು ಸಮರ್ಥವಾಗಿ ಎದುರಿಸಲು ಇವರು ಆಯರೆ, ಮಾಂಬುಜ, ದರೆಟ್ಟು, ಜಲಾಲಗುರಿ, ಮೊದಲಾದ ಕಡೆಗಳಲ್ಲಿ ಭಾರಿ ಗಾತ್ರದ ಸುರಂಗಗಳನ್ನು ಕೊರೆದಿದ್ದರು. ತನ್ನಂತ ಸಣ್ಣಪುಟ್ಟ ಅರಸರನ್ನು ಒಗ್ಗೂಡಿಸಿಕೊಂಡು ಟಿಪ್ಪುಸುಲ್ತಾನನ ದಾಳಿಯನ್ನು ಅತ್ಯಂತ ಪರಾಕ್ರಮದಿಂದ ಎದುರಿಸಿದ್ದರು.ಬ್ರಿಟೀಷರ ಆಳ್ವಿಕೆ ಆರಂಭವಾಗುತ್ತಿದ್ದಂತೆ ಗ್ರಾಮಗಳ ಲೆಕ್ಕಪತ್ರ ನೋಡಿಕೊಳ್ಳಲು ಮತ್ತು ಕಂದಾಯ ವಸೂಲಿಗೆ ಪಟೇಲರುಗಳ ನೇಮಕವಾಗತೊಡಗಿತು. ಇದಾದ ನಂತರ ಕಣಂಜಾರಿನ ರಾಜವೈಭವ ಕುಂದುತ್ತಾ ಸಾಗಿತು. ದೇವಾಲಯದ ಧರ್ಮದರ್ಶಿ ಪದವಿಯೂ ಹಲವಾರು ಜನರಿಗೆ ಹಸ್ತಾಂತರವಾಯಿತು. ಭುಸುದಾರಣಾ ಕಾಯ್ದೆಯಲ್ಲಿ ಕಣಂಜಾರು ಅರಮನೆ ತನ್ನ ಎಲ್ಲವನ್ನೂ ಕಳೆದುಕೊಂಡಿತು. ತನ್ನ ಅರಮನೆಯ ಅಡಿಪಾಯವನ್ನೂ ಕೂಡ…. ಅದು ಬೇರೊಬ್ಬನಿಗೆ ಬರೆದುಕೊಡಬೇಕಾಯಿತು. ಆರು ಮಾಗಣೆಗಳಲ್ಲಿ ಅಧಿಕಾರ ಚಲಾಯಿಸಿದ ದೊಡ್ಡಮನೆ ಕುಟುಂಬಕ್ಕೆ ನಿಲ್ಲಲೂ ನೆಲೆ ಇಲ್ಲದಂತಾಗಿ ಹೋಯಿತು. ಕುಟುಂಬದ ಸದಸ್ಯರೆಲ್ಲಾ ಚದುರಿ ಹೋದರು.ಕೆಲವರು ಮುಂಬೈ ಇನ್ನು ಕೆಲವರು ಹೊರದೇಶಗಳಿಗೆ ಹಾರಿದರು. ಆದರೆ ಮೂಲದ ನೆನಪು ಮಾತ್ರ ಮನದಿಂದ ಮಾಸಲಿಲ್ಲ ದೈವೇಚ್ಛೆಯಂತೆ ಮತ್ತೆ ಎಲ್ಲರೂ ಸೇರಿ ಅರಮನೆಯ ಅಡಿಯ ಜಾಗವನ್ನು ಮತ್ತೆ ಖರೀದಿಮಾಡಿ ಈ ಭವ್ಯ ಅರಮನೆಯನ್ನು ನಿರ್ಮಿಸಿದ್ದಾರೆ. ಈಗ ಇಲ್ಲಿನ ಎಲ್ಲಾ ಕಾರ್ಯಕಲಾಪಗಳೂ ಸುಧೀರ್ ಹೆಗ್ಡೆಯವರ ನೇತೃತ್ವದಲ್ಲಿ ನಡೆಯುತ್ತಿದೆ. ಜನಿವಾರ ಹಾಕಿಕೊಂಡು ಬ್ರಹ್ಮಚರಿಯಾಗಿ ಬದುಕದಿದ್ದರೂ ಇವರದ್ದು ಸಾಧುಗಳನ್ನೂ ನಾಚಿಸುವ ಸಾತ್ವಿಕ ಸ್ವಭಾವ ರಕ್ತದಲ್ಲಿ ಹರಿದು ಬಂದ ರಾಜ ಗಾಂಭಿರ್ಯ ಮುಖದಲ್ಲಿದೆ ಬಿಟ್ಟರೆ ಮಾತಿನಲ್ಲಿ ಎಳ್ಳಷ್ಟೂ ಅಹಂಕಾರವಿಲ್ಲ. ಇವರ ನೇತೃತ್ವದಲ್ಲಿ ಈ ಐತಿಹಾಸಿಕ ಕೇಂದ್ರ ಇನ್ನಷ್ಟು ಬೆಳೆಯಲಿ ಅನ್ನೋದೆ ನಮ್ಮ ಆಶಯ.ಜೈ ಮಹಾಕಾಲ್.

 

Article and pic by Shrikanth shetty

 

About Pavanesh D

Leave a Reply