Home / All / Puttur

Puttur

ಪುತ್ತೂರು ಎಂದು ಹೆಸರು ಹೇಗೆ ಬಂತ್ತು ?

ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರಮುಖ ತಾಲೂಕು ಕೇಂದ್ರ. ಇದು ದಕ್ಷಿಣ ಕನ್ನಡದ ಎರಡನೆ ದೊಡ್ಡ ಪಟ್ಟಣ ಹಾಗೂ ಪ್ರಮುಖ ವ್ಯಾಪಾರೀ ಕೇಂದ್ರ. ಈ ಪಟ್ಟಣಕ್ಕೆ ಪುತ್ತೂರು ಎಂದು ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಮುಖ ದೇವಾಲಯ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಈ ಪಟ್ಟಣದ ಹೆಸರಿಗೂ ನಂಟಿದೆ. ಪುತ್ತೂರು ಹಿಂದೆ “ಬಂಗ” ವಂಶದ ಅರಸರ ರಾಜಧಾನಿಯಾಗಿತ್ತು. ಹಿಂದೆ ಈ ದೇವಾಲಯ ಹಿಂಭಾಗದಲ್ಲಿ ಭಾರೀ ದೊಡ್ಡ ಕೆರೆಯನ್ನು ಮಾಡಲಾಯ್ತು. ಆದರೆ, ಅದರ ಆಳ ಎಷ್ಟೇ ಆದರೂ ನೀರು ದೊರಕಲೇ ಇಲ್ಲ. ಇದಕ್ಕಾಗಿ ದೇವಾಲಯದ ಆಡಳಿತ ವರ್ಗ ಸಾವಿರಾರು ಜನರಿಗೆ ಕೆರೆಯ ತಳದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದರು. ಜನರೆಲ್ಲರ ಹೊಟ್ಟೆ ತುಂಬುತ್ತಿದ್ದಂತೆ ಕೆರೆಯಲ್ಲಿ ನೀರು ತುಂಬತೊಡಗಿತಂತೆ. ಸೇರಿದ ಜನರೆಲ್ಲ ಎದ್ದು ಹೊರಗೆ ಓಡಿದರು. ಅವರ ಎಲೆಯಲ್ಲಿದ್ದ ಅನ್ನದ ಅಗಳುಗಳೇ ಮುತ್ತುಗಳಾಗಿ ಬೆಳೆದವಂತೆ. ಮುತ್ತುಗಳು ಬೆಳೆದ ಊರು -“ಮುತ್ತೂರು” ಎಂದಾಗಿ, ಕ್ರಮೇಣ ಜನರ ಬಾಯಲ್ಲಿ “ಪುತ್ತೂರು” ಎಂದಾಯಿತೆಂದು ಪ್ರತೀತಿ. ಪುತ್ತೂರಿನ ವಿಶೇಷಗಳಲ್ಲಿ “ಬೆಂದ್ರ್‌ತೀರ್ಥ” ಮೊದಲನೆಯದು. “ಬೆಂದ್ರ್‌” ಎಂದರೆ ತುಳುವಿನಲ್ಲಿ “ಬಿಸಿನೀರು” ಎಂದರ್ಥ. ಪುತ್ತೂರು ಸಮೀಪದ ಇರ್ದೆ ಎಂಬಲ್ಲಿ ಇರುವ ಈ ಕೊಳದ ನೀರು ಸದಾಕಾಲ ಬೆಚ್ಚಗಿದ್ದು, ಕೊಳದ ತಳದಿಂದ ಬಿಸಿನೀರಿನ ಬುಗ್ಗೆ ಏಳುತ್ತಿರುತ್ತದೆ. ಈ ರೀತಿಯ ಪ್ರಕೃತಿ ವೈಚಿತ್ರ ಭಾರತದೇಶದಲ್ಲಿ ಒಟ್ಟು ೩ ಕಡೆ ಇದ್ದು, ದಕ್ಷಿಣ ಭಾರತದಲ್ಲಿ ಇದೊಂದೇ ಎನ್ನಲಾಗಿದೆ.

ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತಿ ಡಾ|ಕೆ. ಶಿವರಾಮ ಕಾರಂತರ ಹಲವಾರು ಪ್ರಯೋಗಗಳಿಗೆ ಆಡುಂಬೊಲವಾಗಿದ್ದ ಪುತ್ತೂರಿನಲ್ಲಿ ಅವರು ವಾಸವಾಗಿದ್ದ ಮನೆಯನ್ನು ಇದೀಗ ಕರ್ನಾಟಕ ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಂಡು ಅಲ್ಲಿ ಅವರ ಸ್ಮರಣಾರ್ಥವಾಗಿ “ಬಾಲವನ”ವನ್ನಾಗಿ ಇನ್ನೊಂದು ಮುಖ್ಯ ಪ್ರೇಕ್ಷಣೀಯ ಸ್ಥಳವನ್ನಾಗಿಸಿದೆ. ತುಳು ಜಾನಪದ ವೀರರಾದ ಕೋಟಿ-ಚೆನ್ನಯರ ಹುಟ್ಟಿದ ಸ್ಥಳ ಪಡುಮಲೆ ಪುತ್ತೂರಿನ ಸಮೀಪದಲ್ಲಿದೆ. ಅಲ್ಲಿ ಅವರ ಸಮಾಧಿಗಳೂ ಇವೆ. ದಕ್ಷಿಣ ಕನ್ನಡದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಪುತ್ತೂರಿನ ಸಮೀಪದ ಕೊಡಿಪಾಡಿ ಜನಾರ್ದನ ದೇವಸ್ಥಾನ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ, ಮಾಯಿ ದೆ ದೇವೂಸ್‌ ಇಗರ್ಜಿ -ಇವೂ ಸೇರಿವೆ.

About Pavanesh D

Pavanesh D

Leave a Reply