Home / All / Manthra Devathe

Manthra Devathe

ಮಂತ್ರ ದೇವತೆ :

ಮಂತ್ರ ದೇವತೆ ಎಂಬ ಶಕ್ತಿಯ ಕಥೆಯ ಸಾರಾಂಶ ಹೀಗಿದೆ.
ಮಂತ್ರದೇವತೆ ಎಂಬ ಒಂದು ದೈವೀ ಶಕ್ತಿಯನ್ನು ಇಂದು ಈ ತುಳುನಾಡಿನ ನೂರರಲ್ಲಿ ಹತ್ತು ಮನೆಯವರು ನಂಬಿಕೊಂಡು ಆರಾಧಿಸುತ್ತಾ ಬರುತ್ತಿದ್ದಾರೆ. ಮಂತ್ರ ಮೂರುತಿ ಎಂದು ಕರೆಸಿಕೊಳ್ಳುವ ಈ ಶಕ್ತಿಯನ್ನು ಕೆಲವರು ಬೀರು ಕಲ್ಕುಡನ ಒಡ ಹುಟ್ಟಿದ ಸಹೋದರಿ ‘ಸತ್ಯಮ್ಮ’ನ ಇನ್ನೊಂದು ಅವತಾರ ಎಂದೇ ತಿಳಿದು ಆರಾಧಿಸಿಕೊಂಡು ಬಂದಿದ್ದರೂ ಈ ಮಂತ್ರ ದೇವತೆಗೆ ಸಂಬಂಧಿಸಿದ ಮೂಲ ಕಥೆ ಬೇರೆಯೇ ಇದೆ.
ಕೆಲವು ವರ್ಷಗಳ ಹಿಂದೆ ಕೇರಳ ರಾಜ್ಯದ ಕುಂಟಾಲ ತಂತ್ರಿ ಎಂಬ ಬ್ರಾಹ್ಮಣರೊಬ್ಬರು ಉಪ್ಪಿನಂಗಡಿ ಬಳಿಯ ತನ್ನ ಸಂಬಂದಿಕರೊಬ್ಬರ ಮನೆಗೆ ಬಂದಾಗ ಅಲ್ಲಿ ‘ವರ್ತೆ’ ಎಂಬ ಒಂದು ದೈವೀ ಶಕ್ತಿಗೆ ಪೂಜೆ ನಡೆಯುತ್ತಿರುತ್ತದೆ. ಬಳಿಕ ಆ ದೈವದ ಕಾರ್ಣಿಕದ ಕಥೆಯನ್ನು ಕೇಳಿಸಿಕೊಂಡ ತಂತ್ರಿಗಳು ತನ್ನ ಮನೆಯಲ್ಲಿಯೂ ಇಂಥದ್ದೇ ಒಂದು ದೈವ ಇರುತ್ತಿದ್ದರೆ ನನ್ನ ಸಂಸಾರ ನನ್ನ ಭೂಮಿಯನ್ನು ಕಳ್ಳಕಾಕರಿಂದ ರಕ್ಷಿಸಿ ನಮ್ಮನ್ನು ಕಾಪಾಡುವ ಶಕ್ತಿಯನ್ನು ನಾನೂ ಪೂಜಿಸುತ್ತಿದ್ದೆ ಎಂಬ ಆಶಯದೊಂದಿಗೆ ತನ್ನ ಊರಿಗೆ ಹೊರಟು ಹೋಗುತ್ತಾರೆ.

ಒಂದು ದಿನ ಕುಂಟಾಲ ತಂತ್ರಿಗಳು ತನ್ನ ಮನೆಯಲ್ಲಿ ಜಪ ಮಾಡುತ್ತಿದ್ದ ಸಂದರ್ಭದಲ್ಲಿ ಪಾರ್ವತಿ ದೇವಿಯ ಅನುಗ್ರಹದಿಂದ ಅವರ ಮಡಿಲಿಗೆ ಒಂದು ಸುಣ್ಣದ ಕಲ್ಲಿನ ರೂಪದ ವಸ್ತು ಒಂದು ಬೀಳುತ್ತದೆ.
ತಂತ್ರಿಗಳು ಈ ಅಪರೂಪದ ವಸ್ತುವನ್ನು ತೆಗೆದು ತನ್ನ ‘ಕಲ್ಲಕಲೆಂಬಿ’ ಎಂಬ ಕಪಾಟಿನಲ್ಲಿ ಇಟ್ಟು ಬಾಗಿಲು ಹಾಕುತ್ತಾರೆ. ದಿನಕಳೆದಂತೆ ಒಂದು ಸಂಜೆ ಆ ವಸ್ತು ಕಪಾಟಿನ ಒಳಗಿನಿಂದ ಕುಂಟಾಲ ತಂತ್ರಿಗಳೇ… ನಾನು ಬರೇ ಸುಣ್ಣದ ಕಲ್ಲಲ್ಲ. ನೀವು ಎಂದು ಅಂತರಂಗದಲ್ಲಿ ಬಯಸಿದಂತೆ ಪಾರ್ವತಿ ದೇವಿಯ ಅನುಗ್ರಹದಿಂದ ನಿಮಗೆ ಒದಗಿ ಬಂದ ದೈವಶಕ್ತಿ. ನಿಮ್ಮ ಮಂತ್ರ ಕಾಯಕದೊಂದಿಗೆ ನನ್ನನ್ನು ನೆನೆದು ಮುನ್ನಡೆಯಿರಿ. ತೂಗುಯ್ಯಾಲೆ ಕಟ್ಟಿಸಿ ನನ್ನನ್ನು ಅದರಲ್ಲಿ ಪ್ರತಿಷ್ಠಾಪಿಸಿ ನನಗೆ ಹಾಲು-ಹಣ್ಣು ನೀಡಿ ಭಯ ಭಕ್ತಿಯಿಂದ ಆರಾಧಿಸಿಕೊಂಡು ಬಂದರೆ ನಿಮ್ಮನ್ನು ಸಕಲ ಸಂಪತ್ತು ನೀಡಿ ರಕ್ಷಿಸಿಕೊಂಡು ಬರುತ್ತೇನೆ, ನಂಬಿಕೊಳ್ಳಿ ಎಂಬ ಅಪ್ಪಣೆಯಾಯಿತು. ಆ ಶಕ್ತಿಯ ಮಾತುಗಳನ್ನು ಕೇಳಿಸಿಕೊಂಡ ಕುಂಟಾಲ ತಂತ್ರಿಗಳು ಪುಳಕಗೊಂಡು ಸಂತೋಷದಿಂದ ಮೆರೆದರು. ಮರುದಿನವೇ ಆ ದೈವದ ಅಪ್ಪಣೆ ಪ್ರಕಾರ ವಿಧಿ-ವಿದಾನಗಳನ್ನು ನೆರವೇರಿಸಿದರು. ಮುಂದಿನ ದಿನಗಳಲ್ಲಿ ತನ್ನ ಮಂತ್ರದ ವೈದಿಕ ಕ್ರಿಯೆಗಳಲ್ಲಿ ಈ ದೈವೀಶಕ್ತಿಯನ್ನೇ ಮುಂದಿಟ್ಟುಕೊಂಡು ಆ ಶಕ್ತಿಗೆ ‘ಮಂತ್ರದೇವತೆ’ ಎಂಬ ಹೆಸರನ್ನಿಟ್ಟು ಭಯ-ಭಕ್ತಿಯಿಂದ ಪೂಜಿಸಿಕೊಂಡು ಬರುತ್ತಾರೆ. ಕೇರಳ ರಾಜ್ಯದಲ್ಲಿ ಮಂತ್ರ ದೇವತೆ ಎಂಬ ಶಕ್ತಿಯ ಕಾರಣಿಕ ಊರಿಂದ ಊರಿಗೆ ಹರಡುತ್ತಿರಬೇಕಾದರೆ ಇತ್ತ ಮೂಡಬಿದಿರೆ ಇರುವೈಲು ಎಂಬ ಊರಿನ ‘ತೂತ್ನಾಡ್ ಬರ್ಕೆ’ಯ ಕಾಂತು ಬೈದ್ಯರ ಕಿವಿಗೂ ಈ ದೈವದ ಕಾರಣಿಕದ ಕಥೆಗಳು ಕೇಳಲಾರಂಬಿಸುತ್ತದೆ.ತೂತ್ನಾಡ್ ಬರ್ಕೆಯ ಕಾಂತು ಬೈದ್ಯರದ್ದು ದೊಡ್ಡ ಗುತ್ತಿನ ಮನೆ. ವಿಶಾಲವಾದ ಗದ್ದೆ, ತೋಟವಿರುವ ಭೂಮಿ. ಈ ಭೂಮಿಯಲ್ಲಿ ಯಾವುದೇ ಪಸಲು ಬಂದರೆ ಅದು ಕಳ್ಳ-ಕಾಕರ ಪಾಲಾಗುತ್ತಿತ್ತು. ಕಳ್ಳರ ಬಾಧೆ ವಿಪರೀತವಾಗಿ ಸಹಿಸಲಾಸಾಧ್ಯವಾದಾಗ ನೊಂದು ಬೆಂದು ಕಾಂತು ಬೈದ್ಯರು ಇದನ್ನು ತಡೆಯಲು ನನ್ನ ಮನೆಯಲ್ಲಿ ಒಂದು ದೈವವಾದರೂ ಇರುತ್ತಿದ್ದರೆ ಹೀಗೆ ಆಗುತ್ತಿತ್ತೇ…? ಎಂಬ ಚಿಂತೆಯಲ್ಲಿ ಮುಳುಗಿದ್ದಾಗ ತನ್ನ ಮನೆಗೆ ನೆಂಟರಾಗಿ ತನ್ನ ಬಾವ ಪದ್ದೊಂಜಿ ಬೈದ್ಯರು ಬರುತ್ತಾರೆ. ಕಾಂತು ಬೈದ್ಯರ ನೋವು ವೇದನೆಯನ್ನು ಕೇಳಿಸಿಕೊಂಡ ತನ್ನ ಬಾವ ಕೇರಳ ರಾಜ್ಯದಲ್ಲಿ ಕುಂಟಾಲ ತಂತ್ರಿಗಳ ಮನೆಯಲ್ಲಿ ಒಂದು ಕಾರಣಿಕದ ‘ಮಂತ್ರ ದೇವತೆ’ ದೈವ ಇದೆಯಂತೆ. ಆ ದೈವದ ಹೆಸರಿನಲ್ಲಿ ತೆಂಗು, ಕಂಗುಗಳಿಗೆ ‘ಕೊಡಿ’ ಕಟ್ಟಿದರೆ ಯಾವ ಕಳ್ಳ ಉಪಟಳವೂ ಇರುವುದಿಲ್ಲವಂತೆ ಎಂಬ ಆಶಾಭಾವನೆಯೊಂದಿಗೆ ಸೀದಾ ಕೇರಳ ರಾಜ್ಯದ ಕುಂಟಾಲ ತಂತ್ರಿಗಳನ್ನು ಬೇಟಿ ಮಾಡುತ್ತಾರೆ.ಕಾಂತು ಬೈದ್ಯರ ಜೊತೆಯಲ್ಲಿಯೇ ‘ಮಂತ್ರದೇವತೆ’ ಎಂಬ ಶಕ್ತಿ ಈ ತುಳುನಾಡಿಗೆ ಬರುತ್ತದೆ. ಕಳ್ಳತನ, ವಂಚನೆ ಮಾಡಿದರೂ ಈ ದೈವ ನೇರವಾಗಿ ಆ ಕಳ್ಳರ ಮನೆ ಸೇರಿ ತನ್ನ ಕಾರಣಿಕವನ್ನು ಇಂದಿಗೂ ತೋರಿಸಿಕೊಡುತ್ತದೆ.

ಇಂದು ಈ ತುಳುನಾಡಿನ ಎಲ್ಲೆಲ್ಲೂ ಆ ಶಕ್ತಿಯನ್ನು ಮನೆಯ ಒಳಗೇ ನಂಬಿಕೊಂಡು ಆರಾಧಿಸುವುದನ್ನು ನಾವು ಕಾಣುತ್ತೇವೆ. ಮಂತ್ರದೇವತೆ ಎಂದರೆ ಅದೊಂದು ಮಾಯಾ ಶಕ್ತಿ. ಆದರೆ ಇದಕ್ಕೆ ಕೋಲ ನಡೆಯಬೇಕಾದರೆ ಕಾಯದಲ್ಲಿ ನಲಿಕೆಯವರು ಕೋಲ ಕಟ್ಟಬೇಕು. ಮಂತ್ರ ದೇವತೆಯ ಕೋಲ ಕಟ್ಟುವುದರಲ್ಲಿ ಬಿಡುವಿಲ್ಲದ ಕಲಾವಿದ ಎಂದರೆ ಲೋಕಯ ನಲಿಕೆಯವರು. ಬಂಟ್ವಾಳ ತಾಲೂಕಿನಲ್ಲಿ ಸುಮಾರು ಜನರು ದೈವಗಳಿಗೆ ಕೋಲ ಕಟ್ಟುವವರು ಇರುತ್ತಾರೆ ನಿಜ. ಆದರೆ ಮಂತ್ರ ದೇವತೆಯ ಕೋಲ ಇದೆ ಎಂದಾದರೆ ಒಂದು ವರ್ಷದ ಮೊದಲೇ ಇವರಲ್ಲಿ ದಿನ ನಿಗದಿಪಡಿಸಿಕೊಳ್ಳಬೇಕು
ಮಾಹಿತಿ : ಕೆ.ಎಚ್.ಬಂಗೇರ, ಕಕ್ಯಪದವು
Courtesy : © Beauty of Tulunad

ಮಂತ್ರ ದೇವತೆ : ಮಂತ್ರ ದೇವತೆ ಎಂಬ ಶಕ್ತಿಯ ಕಥೆಯ ಸಾರಾಂಶ ಹೀಗಿದೆ. ಮಂತ್ರದೇವತೆ ಎಂಬ ಒಂದು ದೈವೀ ಶಕ್ತಿಯನ್ನು ಇಂದು ಈ ತುಳುನಾಡಿನ ನೂರರಲ್ಲಿ ಹತ್ತು ಮನೆಯವರು ನಂಬಿಕೊಂಡು ಆರಾಧಿಸುತ್ತಾ ಬರುತ್ತಿದ್ದಾರೆ. ಮಂತ್ರ ಮೂರುತಿ ಎಂದು ಕರೆಸಿಕೊಳ್ಳುವ ಈ ಶಕ್ತಿಯನ್ನು ಕೆಲವರು ಬೀರು ಕಲ್ಕುಡನ ಒಡ ಹುಟ್ಟಿದ ಸಹೋದರಿ ‘ಸತ್ಯಮ್ಮ’ನ ಇನ್ನೊಂದು ಅವತಾರ ಎಂದೇ ತಿಳಿದು ಆರಾಧಿಸಿಕೊಂಡು ಬಂದಿದ್ದರೂ ಈ ಮಂತ್ರ ದೇವತೆಗೆ ಸಂಬಂಧಿಸಿದ ಮೂಲ ಕಥೆ ಬೇರೆಯೇ ಇದೆ. ಕೆಲವು ವರ್ಷಗಳ ಹಿಂದೆ ಕೇರಳ …

Review Overview

User Rating: 2.69 ( 4 votes)
0

About Pavanesh D

Pavanesh D

Leave a Reply