Home / All / Kodamanithaya Daivada Kathe

Kodamanithaya Daivada Kathe

ಕೊಡಮಣಿತ್ತಾಯ ದೈವದ ಕತೆ

ಪ್ರಕೃತಿಯ ಮಡಿಲಲ್ಲಿ ಮೈವೆತ್ತು ನಿಂತಿರುವ ಶಿಬರೂರಿನ ಶ್ರೀ ಕೊಡಮಣಿತ್ತಾಯ ದೈವಸ್ಥಾನವು ಐತಿಹಾಸಿಕ ಮತ್ತು ಕಾರಣಿಕ ಕ್ಷೇತ್ರ. ಪೊಡಮಟ್ಟವರ ಒಡಲಿಷ್ಟಾರ್ಥವ ಕರುಣಿಸುವ ಧರ್ಮದೈವ ಶಿಬರೂರ ಕೊಡಮಣಿತ್ತಾಯ.ಪಾಡ್ದನದಲ್ಲಿ ತಿಳಿಸುವ ಕೊಡಮಣಿತ್ತಾಯ ದೈವದ ಹುಟ್ಟಿನ ಕಥೆ ಹೀಗಿದೆ. ತುಳುನಾಡಿನ ಪ್ರಸಿದ್ಧ ಜೈನ ಮನೆತನದ ಕೊಡಮಣಿ ಬರ್ಕೆಯ ಅರಸು ಕುಂಞಳ್ವರು. ಅಂದೊಂದು ಶುಭವರ್ಷ ತುಲಾ ಸಂಕ್ರಮಣ ಸಮಯದಲ್ಲಿ ಗಂಗಾ ಉಗಮ ಸ್ಥಾನದ ಗಂಗಾಮೂಲ ಸ್ಥಳದಲ್ಲಿ ನಡೆಯುವ ಗಂಗೆಯ ಉತ್ಸವಕ್ಕೆ ಹೋಗುತ್ತಾರೆ. ನಾಲ್ಕೆಂಟು ದಿನಗಳ ಉತ್ಸವದಲ್ಲಿ ಪಾಲ್ಗೊಂಡು ಇನ್ನು ನನ್ನ ಕೊಡಮಣಿ ಬರ್ಕೆಗೆ ಹಿಂತಿರುಗುತ್ತೇನೆಂದು ಮನದಲ್ಲಿ ನಿಶ್ಚಯಿಸಿ ಹಿಂತಿರುಗಲು ದೈವವೊಂದು ಪ್ರಕಟಗೊಂಡು ನಾನು ಕೊಡಮಣಿ ಬರ್ಕೆಗೆ ಬರುತ್ತೇನೆಂದು ಹೇಳುತ್ತದೆ. ಆಳ್ವರು ದೈವದ ಹೆಸರೇನೆಂದು ಕೇಳಲು ’ಹೊಸ ದೈವ ಕುಮಾರ(ಹೊಸದೈವ ಕುಮಾರೆ ಪಂಡ್ದ್ ಬರ್ರ‍ೆ)’ ಎಂದು ಕುಂಞಳ್ವರ ಬೆನ್ನು ಹಿಡಿದು ಬರುತ್ತದೆ. ಅವರ ಹಿಂದೆ ಬಂದ ದೈವವು ಕೊಡಂಗೆ ಗವಸಾಲೆ ಬರ್ಕೆಯಲ್ಲಿ ಹಾಲು ನೀರು ಸೇವಿಸಿ ಕೊಡಮಣಿ ಬರ್ಕೆಗೆ ಬರುತ್ತದೆ. ಮುಂದೆ ಕೊಡಮಣಿ ಬರ್ಕೆಯಲ್ಲಿ ಪ್ರತಿಷ್ಟಾಪನೆಗೊಂಡ ದೈವವು ತನ್ನನ್ನು ‘ಕೊಡಮಣಿತ್ತಾಯ’ ಹೆಸರಿಸಿಕೊಂಡು ಕುಂಞಳ್ವರಿಗೆ ಅಭಯ ನೀಡುತ್ತದೆ. ನಂತರ ’ಕೊಡಮಣಿತ್ತಾಯ’ ಅಭಿಧಾನದಿಂದ ತುಳುನಾಡಿನಲ್ಲಿ ಪ್ರಸಿದ್ಧಿ ಪಡೆಯುತ್ತದೆ. ನಂತರ ಪೆರಿಂಜೆ, ಕೊಡ್ಮಾನ್, ಪಡ್ಡೋಡಿಗುತ್ತು, ಪಡ್ಡೋಡಿ ಬರ್ಕೆ, ಪಡ್ಯಾರಬೆಟ್ಟು, ಕಟೀಲು, ಕುಕ್ಕೆ, ಕುಡುಮ, ಕೇಳದ ಅರಮನೆ, ಜಕ್ಕೊಂಗುಲ್ಲಾಯ ಅರಮನೆ, ವೇಣೂರು ಚಾವಡಿ, ಕಾಪು, ಅರುವ, ಮಂಜಲಡ್ಕ, ಮಡಂತ್ಯಾರ್, ನಡು ನಡೊಡಿಸ್ಥಾನ, ಮೂಡೈ ಅಜ್ಜಾಯಿಸಾನ, ಲಾಯಿಲಗುತ್ತು, ಪುದ್ದೊಟ್ಟು ಗುತ್ತು, ಇರುವೈಲ್, ಬಡಕೋಡಿಗುತ್ತು ಹೀಗೆ ಇನ್ನು ಹಲವಾರು ಕಡೆ ನೆಲೆನಿಲ್ಲುತ್ತದೆ.ಸುಮಾರು 700ವರ್ಷಗಳ ಹಿಂದೆ ತಿಬಾರಗುತ್ತು ತಿಮ್ಮತಿಕರಿವಾಳರ ಭಕ್ತಿಗೆ ಮೆಚ್ಚಿ ಇರುವೈಲಿನಿಂದ ತಿಬಾರಿ(ಶಿಬರೂರಿ)ಗೆ ಬಂದ ಕತೆ ಮನೋಜ್ಞವಾಗಿದೆ.

ದೈವಭಕ್ತನಾದ ತಿಬಾರ(ಶಿಬರೂರು) ಗುತ್ತಿನ ತಿಮ್ಮತಿ ಕರಿವಾಳ್ ಹಾಗೂ ಎಕ್ಕಾರಿನ ದುಗ್ಗಣ್ಣಕಾವರು ಇರುವೈಲ್ ಶ್ರೀ ದುರ್ಗಾಪರಮೇಶ್ವರೀ ದೇವರ ದರ್ಶನ ಪಡೆದು , ’ಪೊಸದೈವ’ ಕೊಡಮಣಿತ್ತಾಯನಿಗೆ ಹರಕೆ ಸಲ್ಲಿಸಲು ಕೆಳಬರ್ಕೆಗೆ ಬರುತ್ತಾರೆ. ಅಲ್ಲಿ ಹರಕೆ ಹಾಕಿ ಗಂಧಪ್ರಸಾದ ಸ್ವೀಕರಿಸಿ, ಬಾಯಾರಿಕೆ ಸ್ವೀಕರಿಸಿ, ಇನ್ನು ತಮ್ಮ ಊರಿಗೆ ಹೊರಡುತ್ತಾರೆ. ಆಗ ಕೆಳಬರ್ಕೆಯವರು ಅವರಿಗೆ ಒಂದೊಂದು ಎತ್ತು ಮತ್ತು ಕೋಳಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಉಡುಗೊರೆಗಳನ್ನು ಹಿಡಿದುಕೊಂಡು ಇಬ್ಬರಿಗೆ ನಡೆದು ಬರುವಾಗ ದಾರಿಮಧ್ಯೆ ಬಾಯಾರಿಕೆಯಾಗುತ್ತದೆ. ಎತ್ತು ಮತ್ತು ಕೋಳಿಗಳನ್ನು ಸಮೀಪದ ಅಶ್ವತ್ಥ ಮರಕ್ಕೆ ಕಟ್ಟಿ ಹಾಕಿ ಸಮೀಪವಿರುವ ನಡ್ಡೋಡಿಗುತ್ತುವಿಗೆ ಹೋಗುತ್ತಾರೆ. ಅಲ್ಲಿ ಬಾಯಾರಿಕೆ, ಆಯಾಸ ಪರಿಹರಿಸಿ ಪ್ರಯಾಣ ಮುಂದುವರಿಸಲು ಅಶ್ವತ್ಥ ಮರದಡಿಗೆ ಬರುವಾಗ ಎತ್ತುಗಳಿಗೆ ಆವೇಶ ಬಂದಿರುತ್ತದೆ. ಇದೇನೆಂದು ಆಶ್ಚರ್ಯದಿಂದ ಮತ್ತೆ ಎತ್ತು ಮತ್ತು ಕೋಳಿಗಳನ್ನು ತಮ್ಮೋರಿಗೆ ಕರೆದುಕೊಂಡು ಹೋಗುತ್ತಾರೆ. ತಾಂಗಡಿ ಬರ್ಕೆಗೆ ಬಂದ ದುಗ್ಗಣ್ಣಕಾವೇರರು ಎತ್ತಿನ ಆವೇಶಕ್ಕೆ ಕಾರಣವೇನೆಂದು ಕೇಳಲು ಬಲ್ಯಾಯರು ರಾಜನ್ ದೈವಗಳಾದ ಒರಿ ಉಲ್ಲಾಯ ಮತ್ತು ಧರ್ಮಧೈವ ಕೊಡಮಣಿತ್ತಾಯಗಳು ನಿಮ್ಮಲ್ಲಿಗೆ ಬಂದಿದ್ದಾರೆ ಅವುಗಳನ್ನು ಪ್ರತಿಷ್ಠಾಪಿಸಬೇಕೆಂದು ಹೇಳುತ್ತಾರೆ. ಅವರ ಮಾತಿನಂತೆ ದೇರಿಂಜಗಿರಿ(ಎಕ್ಕಾರು ಸ್ಥಾನ) ಗುಡಿಕಟ್ಟಿಸಿ ಆರಾಧಿಸುತ್ತಾರೆ. ಇತ್ತ ತಿಬಾರಗುತ್ತಿನ ತಿಮ್ಮತ್ತಿ ಕರಿವಾಳರು ತನಗೆ ಕೊಟ್ಟ ಉಡುಗೊರೆಯನ್ನು ಹಿಡಿದುಕೊಂಡು ತಿಬಾರಗುತ್ತಿಗೆ ಬರುತ್ತಾರೆ. ರಾತ್ರಿ ಮಲಗಿರುವಾಗ ದನದ ಕೊಟ್ಟಿಗೆಯಲ್ಲಿ ಗೋವುಗಳ ಕಿರುಚಾಟ ಕೇಳಿಸುತ್ತದೆ. ಆಗ ಅವರಿಗೆ ಹಿಂದಿನ ದಿವಸದ ಎತ್ತಿನ ಆವೇಶದ ನೆನಪಾಗಿ ಮರುದಿವಸ ಬಲ್ಯಾಯರಲ್ಲಿ ಪ್ರಶ್ನೆ ಕೇಳುತ್ತಾರೆ. ಆಗ ಅವರಿಗೆ ಉಲ್ಲಾಯ ಮತ್ತು ಧರ್ಮದೈವಗಳು ಬಂದ ವಿಚಾರ ಅರುವುತ್ತಾರೆ. ಆಗ ಅವರು ಸಂತೋಷದಿಂದ ದೈವಗಳಿಗೆ ದೈವಸ್ಥಾನ ಕಟ್ಟಿಸಲು ನಿರ್ಧರಿಸುತ್ತಾರೆ. ಅದಕ್ಕಾಗಿ ಕೆಸರುಕಲ್ಲು ಹಾಕಲು ಧರ್ಮಾತ್ಮ ವಿಷವೈದ್ಯರಾದ ಸೂರಿಂಜೆಗುತ್ತು ತ್ಯಾಂಪ ಶೆಟ್ರಲ್ಲಿ ಹೇಳುತ್ತಾರೆ. ತ್ಯಾಂಪ ಶೆಟ್ರು ತನಗೊದಗಿದ ಪುಣ್ಯಕಾರ್ಯವನ್ನು ನೆನೆದು ಆನಂದದಿಂದ ಒಪ್ಪಿ, ಆ ಕಾರ್ಯವನ್ನು ನಡೆಸಿ ಕೊಡುತ್ತಾರೆ. ನಂತರ ತಿಬಾರಗುತ್ತಿನಲ್ಲಿ ಗುಡಿನಿರ್ಮಾಣವಾಗುತ್ತದೆ. ತದನಂತರ ತ್ಯಾಂಪಶೆಟ್ರು ತನ್ನ

ವಿಷವೈದವನ್ನು ಇನ್ನು ಮುಂದವರಿಸುವ ಸರಿಯಾದ ಜನ ತನ್ನ ಮುಂದಿಲ್ಲವೆಂದು ತಿಳಿದು ತನ್ನ ಗಿಣಿಚಿರಾವಿಯಲ್ಲಿದ್ದ ವಿಷ ಹೀರುವ ಕಲ್ಲನ್ನು ದೈವಗಳನ್ನು ನೆನೆಸಿ ’ ಇನ್ನು ಮುಂದೆ ಈ ಬಾವಿಯ ನೀರು ಮತ್ತು ದೈವ ಗಂಧವೇ ವಿಷಕ್ಕೆ ಮದ್ದಾಗಲಿ’ ಎಂದು ಹೇಳಿ ತಿಬಾರಗುತ್ತಿನ ಬಾವಿಗೆ ಹಾಕುತ್ತಾರೆ. ಇದರಿಂದ ಕೊಡಮಣಿತ್ತಾಯ ದೈವಕ್ಕೆ ‘ವೈದ್ಯನಾಥ’ನೆಂಬ ಅಭಿದಾನ ಪ್ರಾಪ್ತವಾಯಿತು. ಕಾರಣಿಕ ಸ್ಥಳ ಶಿಬರೂರಿನ ತೀರ್ಥದ ಬಾವಿಯಲ್ಲಿ ಸಿಗುವ ತೀರ್ಥವನ್ನು, ದೈವದ ಗಂಧಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿದರೆ ವಿಷನಾಶವಾಗುತ್ತದೆ ಎಂಬ ನಂಬಿಕೆ. ಅಷ್ಟು ಮಾತ್ರವಲ್ಲದೆ ಬಾವಿಯ ತೀರ್ಥ ಮತ್ತು ದೈವದ ಗಂಧಪ್ರಸಾದ ಸ್ವೀಕರಿಸುವವರಿಗೆ ನಾಗದೋಷ ನಿವಾರಕ, ಚರ್ಮವ್ಯಾನಾಶಕ, ಉಬ್ಬಸ ರೋಗ ದೂರಿಕರಿಸುವ ಶಕ್ತಿಯಲ್ಲದೆ, ಸಂತಾನ ಪ್ರತಿಬಂಧಕ ದೋಷವೂ ಪರಿಹಾರವಾಗುವುದು. ವಿಷಜಂತು ಕಚ್ಚಿದ ಅನೇಕ ಜನರನ್ನು ರಕ್ಷಿಸಿದ ಜ್ವಲಂತ ಉದಾಹರಣೆಗಳು ಪರಿಸರದಲ್ಲಿ ಕಾಣುತ್ತಿವೆ. ಈ ಬಾವಿಯ ನೀರನ್ನು ಏತದಿಂದಲೇ ಮೇಲಕ್ಕೆತ್ತುತ್ತಾರೆ. ವರ್ಷಾವ ನೇಮದ ಸಂದರ್ಭ ಕ್ಷೇತ್ರಕ್ಕೆ ಭೇಟಿ ನೀಡುವ ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಈ ಪವಿತ್ರ ತೀರ್ಥ ಸ್ವೀಕರಿಸುತ್ತಾರೆ. ಮಂಗಳೂರಿನಿಂದ ಸುಮಾರು ೨೫ ಕಿ.ಮೀ. ದೂರದಲ್ಲಿ ಶಿಬರೂರು ಕ್ಷೇತ್ರವಿದೆ. ಇದು ಪ್ರಸಿದ್ಧ ‘ಕಟೀಲು ಕ್ಷೇತ್ರ’ದಿಂದ 2 ಕಿ.ಮೀ., ಕಿನ್ನಿಗೋಳಿಯಿಂದ 3 ಕಿ.ಮೀ. ದೂರದಲ್ಲಿದೆ.

ಈ ದೈವಸ್ಥಾನದಲ್ಲಿ ಪ್ರತಿವರ್ಷ ಧನು ಸಂಕ್ರಮಣಕ್ಕೆ ಧ್ವಜಾರೋಹಣವಾಗಿ ಮಹೋತ್ಸವವು ಜರಗುತ್ತದೆ. ಮರುದಿನ ಮುಂಜಾನೆ ಶ್ರೀ ಉಳ್ಳಾಯ ದೈವದ ನೇಮದಲ್ಲಿ ತುಲಾಭಾರ ಸೇವೆ, ಕಂಚೀಲು ಸೇವೆ, ಉರುಳು ಸೇವೆಗಳು ನಡೆಯುವುದಲ್ಲದೇ ಮಹಾ ಅನ್ನಸಂತರ್ಪಣೆಯು ನಡೆಯುತ್ತಿದೆ. ಅದೇ ರಾತ್ರಿ ಕೊಡಮಣಿತ್ತಾಯ ದೈವದ ನೇಮ, ಬಂಡೀ ಉತ್ಸವ, ಮರುದಿನದಿಂದ ಕ್ರಮವಾಗಿ ಕಾಂತೇರಿ ಧೂಮಾವತಿ, ಸರಳ ಧೂಮಾವತಿ, ಜಾರಂದಾಯ ದೈವ, ಕೈಯೂರು ಧೂಮಾವತಿ ಮತ್ತು ಪಿಲಿಚಾಮುಂಡಿ ದೈವದ ನೇಮೋತ್ಸವಗಳು ನಡೆದು ಧ್ವಜಾರೋಹಣ ನಡೆಯುತ್ತದೆ. ಧ್ವಜಾರೋಹಣದಿಂದ ಧ್ವಜಾವರೋಹರಣದವರೆಗೆ ಪ್ರತಿನಿತ್ಯ ಅನ್ನಸಂತರ್ಪಣೆ ಜರಗಲಿದೆ.ಶ್ರೀಕ್ಷೇತ್ರ ಕಟೀಲಿಗೂ ಶಿಬರೂರಿ(ತಿಬಾರ್)ನ ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೂ ಅಭೇದ್ಯ ಸಂಬಂಧವಿದೆ. ವಾರ್ಷಿಕ ಜಾತ್ರೆಯ ಸಂದರ್ಭ ಶ್ರೀ ಕೊಡಮಣಿತ್ತಾಯ ದೈವವು ಕಟೀಲಿಗೆ ಭೇಟಿ ಮಾಡುವಂತಹ ಒಂದು ಸಂಪ್ರದಾಯವಿದೆ. ಇದು ತುಂಬಾ ನಯನಮನೋಹರವಾಗಿರುತ್ತದೆ.

ನಾಗನ ಸಹಿತವಾಗಿ ಒಂದು ವಿಶೇಷವಾದ ಸಾನಿಧ್ಯ ಶಿಬರೂರಲ್ಲಿದೆ. ಇವತ್ತು ಅಲ್ಲಿಯ ತೀರ್ಥವನ್ನು ಸ್ವೀಕರಿಸಿದರೆ ಯಾವುದೇ ಸರ್ಪಗಳ ವಿಷ ಪರಿಹಾರ ಆಗುತ್ತದೆಂದು ಪ್ರತ್ಯಕ್ಷ ನಿದರ್ಶನ ಇದೆ. ಅಲ್ಲಿಯ ತೀರ್ಥ ಬಾವಿಯ ಪಾವಿತ್ರ್ಯವನ್ನು ಇವತ್ತಿನವರೆಗೂ ಕಾಪಾಡಿಕೊಂಡು ಬಂದಿರುವುದು ಅಲ್ಲಿಯ ಕ್ಷೇತ್ರದ ಬಗೆಗಿರುವ ಕಾಳಜಿ ಪ್ರಶಂಸನೀಯ. ಶಿಬರೂರಿನ ಕೊಡಮಣಿತ್ತಾಯನಿಗೂ ಶಿಬರಾಯರ ಮನೆತನಕ್ಕೂ ಅನಾದಿಯಿಂದಲೂ ಅವಿಚ್ಛಿನ್ನವಾದ ಸಂಬಂಧವಿದೆ. ಶಿಬರೂರು ಕ್ಷೇತ್ರದ ಪಕ್ಕದಲ್ಲೇ ಪುಣ್ಯ ನದಿ ನಂದಿನಿಯೂ ಹರಿಯುತ್ತದೆ. ಮಿಜಾರಿನ ಕನಕಗಿರಿಯಲ್ಲಿ ಹುಟ್ಟಿ ಕಟೀಲು, ಶಿಬರೂರು, ಪಾವಂಜೆ ಕ್ಷೇತ್ರಗಳನ್ನು ದಾಟಿ ಕಡಲನ್ನು ಸೇರುತ್ತದೆ. ಕೊಡೆತ್ತೂರು ಮತ್ತು ಅತ್ತೂರು ನೆರಕರೆಯ ಊರುಗಳಾಗಿದ್ದು ಅಲ್ಲಿಯ ಊರದೈವವಾದ ಶ್ರೀ ಅರಸು ಕುಂಜರಾಯನ ವರ್ಷಾವಧಿ ಜಾತ್ರೆಯ ಸಂದರ್ಭ ಶ್ರೀ ಶಿಬರೂರ ಕೊಡಮಣಿತ್ತಾಯನ ಭಂಡಾರ ಬಂದು ಅಲ್ಲಿ ಶ್ರೀ ದೈವಕ್ಕೂ ಕೂಡಾ ನೇಮ ನಡೆಯುತ್ತದೆ.

Courtesy : Beauty of Tulunadu

About Pavanesh D

Pavanesh D

Leave a Reply