Home / All / Kambula Neesheda

Kambula Neesheda

 

ಸಂಸ್ಕೃತಿಯ ತಳಬುಡ ತಿಳಿಯದೆ ನಿಷೇಧ ಶಿಫಾರಸು!

ಕಂಬಳದಲ್ಲಿ ಹಿಂಸೆಯ ಪ್ರಯೋಗವಾಗುತ್ತದೆ ಎಂಬುದೇ ತಪ್ಪು ಕಲ್ಪನೆ

ಕಂಬಳದಲ್ಲಿನ ಬೆತ್ತದೇಟಿಗಿಂತ ನೂರುಪಟ್ಟು ಹೆಚ್ಚು ಕ್ರೌರ್ಯವನ್ನು ನೂರು ಬಗೆಗಳಲ್ಲಿ ಬೇರೆಬೇರೆ ಪ್ರಾಣಿಗಳ ಮೇಲೆ ನಡೆಸಲಾಗುತ್ತಿದೆ. ಅದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಏಕೆ…?

ಕಂಬಳವನ್ನು ನಿಷೇಧಿಸಿ ಸರಕಾರದಿಂದ ಕಂಬಳ ಸಂಘಟಕರಿಗೆ ನೊಟೀಸ್ನೀಡಲಾಗಿದೆ. ಇದರ ಹಿನ್ನೆಲೆಯಲ್ಲಿರುವುದು ಪ್ರಾಣಿಹಿಂಸೆಯನ್ನು ತಡೆಯಬೇಕೆಂಬ ಉದ್ದೇಶದ ಸುಪ್ರೀಂ ಕೋರ್ಟ್ಆದೇಶ. ಇದರಿಂದಾಗಿ ಕರಾವಳಿಯ ಜಾನಪದ ಕ್ರೀಡೆಗೆ ಕಂಟಕ ಎದುರಾಗಿದೆ. ನಿಜವಾಗಿಯೂ ಕಂಬಳದಲ್ಲಿ ಪ್ರಾಣಿ ಹಿಂಸೆ ನಡೆಯುತ್ತದೆಯೇ, ಕಂಬಳ ನಿಷೇಧದ ಪರಿಣಾಮ ಏನು ಇತ್ಯಾದಿ ಜಿಜ್ಞಾಸೆಗಳಿಗೆ ಮೂಡಬಿದಿರೆಯ ಗುಣಪಾಲ ಕಡಂಬ ಉತ್ತರಿಸಿದ್ದಾರೆ.
ನಿವೃತ್ತ ಪ್ರಾಂಶುಪಾಲರಾಗಿರುವ ಗುಣಪಾಲ ಕಡಂಬ ಅವರು ಕಂಬಳದ ಉಳಿವಿಗಾಗಿ ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ಸ್ಥಾಪಿಸಿ ಆಸಕ್ತರಿಗೆ ತರಬೇತಿ ನೀಡುತ್ತಿರುವವರು, ಹಲವು ಕಂಬಳ ಕೂಟಗಳ ಪ್ರಧಾನ ತೀರ್ಪುಗಾರರಾಗಿ, ವೀಕ್ಷಕ ವಿವರಣೆಗಾರರಾಗಿ ಕಳೆದ 45 ವರ್ಷಗಳಿಂದ ಕಂಬಳದ ಒಳಹೊರಗನ್ನು ಅರಿತವರು.

ಕಂಬಳವನ್ನು ನಿಷೇಧಿಸಿರುವುದರ ಹಿಂದಿರುವ ಉದ್ದೇಶ ಪ್ರಾಣಿ ಹಿಂಸೆ ತಡೆ. ಇದು ಎಷ್ಟರ ಮಟ್ಟಿಗೆ ಸರಿ ?
ಕಂಬಳದಲ್ಲಿ ಪ್ರಾಣಿಹಿಂಸೆ ನಡೆಯುವುದಿಲ್ಲ. ಕಂಬಳ ಹಿಂಸಾತ್ಮಕ ಆಚರಣೆಯಲ್ಲ. ಇದು ಜನರ ನಂಬಿಕೆ, ಸಂಸ್ಕೃತಿ, ಆಚರಣೆಯ ಅನುಸಾರ ಅಸ್ತಿತ್ವದಲ್ಲಿದೆ. ಹಿಂಸೆ ತಡೆಯುವುದಕ್ಕೆ ಕಂಬಳ ನಿಷೇಧ ಎನ್ನುವುದಾದರೆ, ಮೊನ್ನೆಯಷ್ಟೇ ಹಾವೇರಿಯಲ್ಲಿ ನಡೆದ ಹೋರಿ ರೇಸ್ಗೆ ಅವಕಾಶ ಕೊಟ್ಟದ್ದು ಯಾಕೆ? ಕಂಬಳ ಎಂದಾಕ್ಷಣ ಸ್ಪರ್ಧೆ ಎಂದು ಪರಿಭಾವಿಸುವುದು ಶುದ್ಧ ತಪ್ಪು. ಕಂಬಳ ಜನರ ಭಕ್ತಿಯ, ನೆಲದ ಪ್ರೀತಿಯ, ಗೌರವದ ಪ್ರತೀಕ.

ಕಂಬಳದ ಕೋಣಗಳನ್ನು ಓಡಿಸುವುದರಲ್ಲಿ ನಿಜವಾಗಿಯೂ ಹಿಂಸೆ ಪ್ರಯೋಗವಾಗುತ್ತದೆಯೇ ?
ಪ್ರಾಣಿ ಹಿಂಸೆ ಮಾಡಬಾರದು ಎನ್ನುವುದು ಸರಿ. ಆದರೆ ಯಾವುದರಿಂದ ಪ್ರಾಣಿ ಹಿಂಸೆ ನಡೆಯುತ್ತದೆ ಎನ್ನುವುದು ಬಹು ಮುಖ್ಯವಾದದ್ದು. ಕಂಬಳದಲ್ಲಿನ ಬೆತ್ತದೇಟಿಗಿಂತ ನೂರುಪಟ್ಟು ಹೆಚ್ಚು ಕ್ರೌರ್ಯವನ್ನು ನೂರು ಬಗೆಗಳಲ್ಲಿ ಬೇರೆಬೇರೆ ಪ್ರಾಣಿಗಳ ಮೇಲೆ ನಡೆಸಲಾಗುತ್ತಿದೆ. ಅದರ ಮೇಲೆ ಯಾರೂ ಕ್ರಮ ಕೈಗೊಂಡಿಲ್ಲ ಏಕೆ? ಕಂಬಳದ ಕೋಣಗಳನ್ನು ಮಕ್ಕಳ ಹಾಗೆ ಪೋಷಣೆ ಮಾಡುತ್ತಾರೆ. ಹಿಂದಿನಂತೆ ಈಗ ಕೋಣಗಳಿಗೆ ಏಟು ನೀಡುವ ಪದ್ಧತಿ ಇಲ್ಲ. ಓಟಗಾರರು ಒಂದು ಬೆತ್ತಕ್ಕಿಂತ ಹೆಚ್ಚು ಬಳಸುವುದಿಲ್ಲ. ಕಂಬಳ ಬಹುಮಾನಕ್ಕಾಗಿಯಷ್ಟೇ ನಡೆಯುವ ಸ್ಪರ್ಧೆ ಅಲ್ಲ. ಅದು ಒಂದು ಆಚರಣೆ. ಕಂಬಳ ನಡೆಯುವ ಗದ್ದೆ ಪವಿತ್ರ ಸ್ಥಳ ಎಂದು ಪರಿಭಾವಿಸಲಾಗುತ್ತದೆ. ಕೆಲವಡೆ ಇಡೀ ಊರಿನ ಜಾನುವಾರುಗಳನ್ನು ಕಂಬಳಗದ್ದೆಗೆ ಇಳಿಸುವ ಸಂಪ್ರದಾಯ ಇದೆ. ಹೀಗಿರುವಾಗ, ಕಂಬಳದಲ್ಲಿ ಹಿಂಸೆಯ ಪ್ರಯೋಗ ನಡೆಯುತ್ತದೆ ಎಂಬುದೇ ತಪ್ಪು ಕಲ್ಪನೆ. ಸಂಸ್ಕೃತಿಯ ತಳಬುಡ ಅರಿಯದವರು ಕಂಬಳ ನಿಷೇಧಕ್ಕೆ ಮುಂದಾಗಿದ್ದಾರೆ.

ಕಂಬಳಕ್ಕೊಂದು ಸಾಂಸ್ಕೃತಿಕ ಸ್ವರೂಪ ಮತ್ತು ಕೃಷಿ ಹಿನ್ನೆಲೆ ಇದೆಯಲ್ಲ ?
ಖಂಡಿತ. ಕಂಬಳ ಒಂದು ಉತ್ಸವ. ಊರಿನ ದೇವರ ಜಾತ್ರೆಯ ಬಗ್ಗೆ ಇರುವ ನಂಬಿಕೆ, ಸಂಪ್ರದಾಯ ಇಲ್ಲೂ ಇದೆ. ಮಡಿವಂತಿಕೆ, ಜಾತ್ರೆಗೆ ಕೊಡಿಯೇರಿದ ಮೇಲೆ ಹೇಗೋ ಹಾಗೆಯೇ ಕಂಬಳಕ್ಕೆ ದಿನ ನಿಗದಿಯಾದ ಮೇಲೆ ಊರು ಬಿಡದೆ ಇರುವುದು ಇತ್ಯಾದಿ ಇದೆ. ಕೃಷಿ ಹಿನ್ನೆಲೆಯ ಕಂಬಳಕೂಟಗಳು ಜಾತಿಮತಗಳ ಎಲ್ಲೆಯನ್ನು ಮೀರಿ ನಡೆಯುತ್ತವೆ.

ಕೆಲವೆಡೆ ದೇವರ ಕಂಬಳವಿದೆ. ಅಲ್ಲಿ ಸ್ಫರ್ಧೆಯಿಲ್ಲ. ಅದೂ ನಿಷೇಧವಾಗುತ್ತದೆಯೇ?
ದೇವರ ಕಂಬಳಕ್ಕೆ ಅತ್ಯಂತ ಮಹತ್ವದ ಸ್ಥಾನ ಇದೆ. 45 ವರ್ಷಗಳಿಂದ ಈಚೆಗೆ ಆಧುನಿಕ ಸ್ವರೂಪದ ಕಂಬಳ ಕೂಟಗಳು ನಡೆಯುತ್ತಿದ್ದರೂ, ಅದಕ್ಕಿಂತ ಮಿಗಿಲಾಗಿ ಸಾಂಪ್ರದಾಯಿಕ ಕಂಬಳ ಕೂಟಗಳು ಸುಮಾರು 200ಕ್ಕೂ ಹೆಚ್ಚು ನಡೆಯುತ್ತವೆ. ಬಜಗೋಳಿ, ಮೂಲ್ಕಿ, ವಂಡಾರು ಕಂಬಳದಂತಹ ನೂರಾರು ಕಂಬಳಗಳನ್ನು ಉದಾಹರಿಸಬಹುದು. ವಂಡಾರಿನಲ್ಲಿ ಕಂಬಳ ಉತ್ಸವ ಎಂದರೆ ತಿಂಗಳುಪೂರ್ತಿ ಜಾತ್ರೆ. ಅಲ್ಲಿ ರೈತರಿಗೆ ಬೇಕಾದ ಕೃಷಿ ಪರಿಕರಗಳ ಮಾರಾಟ, ಕೊಡುಕೊಳ್ಳುವಿಕೆ ನಡೆಯುತ್ತಿತ್ತು. ದೇವರ ಕಂಬಳ ನಡೆಯುವ ಗದ್ದೆಯ ಕೆಸರಿಗೆ ಔಷಧೀಯ ಗುಣಗಳಿವೆ ಎಂಬ ನಂಬಿಕೆಯಿದೆ. ಅದನ್ನು ಕೊಂಡೊಯ್ದು ಹಟ್ಟಿಗೆ, ಜಾನುವಾರುಗಳಿಗೆ ಪ್ರೋಕ್ಷಣೆ ಮಾಡುತ್ತಾರೆ. ಕಟ್ಟಪುಣಿಗೆ ಬೆಳ್ಳಕ್ಕಿ ಹಾಕುವ ಪದ್ಧತಿ ಇತ್ತು. ಗದ್ದೆಯ ಸುತ್ತ ರಥೋತ್ಸವ ನಡೆಯುತ್ತಿತ್ತು. ಹೀಗೆ ದೇವರ ಗದ್ದೆಯ ಕಂಬಳಕ್ಕೆ ವಿಶೇಷ ಸ್ಥಾನಮಾನ ಇದೆ. ಇಲ್ಲಿ ಕೋಣಗಳನ್ನು ಓಡಿಸುವ ಪ್ರಶ್ನೆಯೇ ಇಲ್ಲ. ಇದು ನಿಷೇಧವಾದರೆ ಜನರ ಧಾರ್ಮಿಕ ಭಾವನೆಗಳಿಗೆ ಕೊಡಲಿಯೇಟು ಬಿದ್ದ ಹಾಗಾಗುತ್ತದೆ.

ಹಲವು ಕಂಬಳಗಳು ಅಂತಿಮ ಹಂತದಲ್ಲಿ ನಿಂತು ಬಿಡುವಂತಾಗಿದೆಯಲ್ಲ ?
ಹೌದು. ಇದು ನಿಷೇಧದ ಪರಿಣಾಮ. ಲಕ್ಷಾಂತರ ರೂ. ಖರ್ಚು ಮಾಡಿ ಸಿದ್ಧತೆ ಮಾಡಿಕೊಂಡ ಹಂತ ದಲ್ಲಿ ಏಕಾಏಕಿ ನೊಟೀಸ್ಬಂದ ಕಾರಣ ಕಂಬಳ ಉತ್ಸವ ಅರ್ಧಕ್ಕೆ ಮೊಟಕುಗೊಂಡಿದೆ. 1974ರಲ್ಲಿ ಭೂ ಸುಧಾರಣೆ ಕಾನೂನಿನಿಂದ ಹಲವು ಕಂಬಳ ಗದ್ದೆಗಳು ಹೋಳಾಗಿದ್ದವು. ಈಗ ಇದು ಇನ್ನೊಂದು ನಿರ್ಣಾಯಕ ತಿರುವಿನ ಹಂತ.

ನಿಷೇಧದಿಂದ ಕಂಬಳವನ್ನು ಹೊರಗಿಡುವಲ್ಲಿ ಮುಂದಿನ ನಡೆ ಏನು?
.., ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಕುರಿತು ಸಂಬಂಧಪಟ್ಟವರಿಗೆ ಒತ್ತಡ ತಂದು ಕಂಬಳ ನಿಷೇಧವನ್ನು ತೆರವುಗೊಳಿಸಬೇಕು. ಸುಪ್ರೀಂ ಕೋರ್ಟ್ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸುವ ಕುರಿತು ಉಲ್ಲೇಖ ಮಾಡಿತ್ತು. ಅದರಲ್ಲಿ ಕಂಬಳದ ನೇರ ಪ್ರಸ್ತಾವ ಇಲ್ಲ. ಇದ್ದರೂ ಕಂಬಳದ ಮಹತ್ವ, ಅದರಲ್ಲಿ ಪ್ರಾಣಿಹಿಂಸೆ ಇಲ್ಲದಿರುವ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಹಾಲಿ ಸರಕಾರದಲ್ಲಿರುವ ಕರಾವಳಿಯ ನಾಲ್ವರು ಸಚಿವರು ಕಂಬಳ ಕೂಟಗಳನ್ನು ಮುನ್ನಡೆಸಿದವರು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನೇತ್ರಾವತಿ ಧಿಪಲ್ಗುಣಿ ಕಂಬಳ ನಡೆಸಲಾಗುತ್ತಿದೆ. ಸರಕಾರ ಕಂಬಳ ಕೂಟಕ್ಕೆ ಹಿಂದೆ ಅನುದಾನವನ್ನು ನೀಡಿದೆ. ಕಂಬಳ ಕ್ಷೇತ್ರದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ, ಓರ್ವ ಕಂಬಳ ಓಟಗಾರನಿಗೆ ಕ್ರೀಡಾರತ್ನ ಪ್ರಶಸ್ತಿ ನೀಡಿದೆ. ಹೀಗಾಗಿ ಸರಕಾರಕ್ಕೆ ಕಂಬಳದ ಮಹತ್ವದ ಕುರಿತು ಅರಿವಿಲ್ಲ ಎನ್ನುವಂತಿಲ್ಲ.
ಮಾತುಕತೆ: ಕಿರಣ್ಪ್ರಸಾದ್ಕುಂಡಡ, Sourtce : Udayavani | Nov 26, 2014

 

About Pavanesh D

Pavanesh D

Leave a Reply