Home / All / Kalmadi Bagu Panjurli Marada Kathe

Kalmadi Bagu Panjurli Marada Kathe

ಕಲ್ಮಾಡಿಯಲ್ಲಿ ಸಿಕ್ಕಿದ ನಿಗೂಢ ಮರದ ರೋಚಕ ಕಥೆ!
# ಉಡುಪಿ ಸಮೀಪದ ಕಲ್ಮಾಡಿ. ಮಲ್ಪೆಯಿಂದ ಕೆಲವೇ ಮೀಟರ್ ದೂರದಲ್ಲಿ ಈ ಪ್ರದೇಶವಿದೆ. ಕಡಲಿಗೆ ನದಿ ಸೇರುವ ಜಾಗವನ್ನು ಕಡಲಿನ ಕೈ ಎಂದು ಕರೆಯುತ್ತಾರೆ. ಕಲ್ಮಾಡಿ ಪಕ್ಕದಲ್ಲಿ ಕೂಡ ಕಡಲಿನ ಹಿನ್ನೀರಿನಿಂದ ನಿರ್ಮಾಣವಾದ ಒಂದು ಸರೋವರ ಇದೆ. ಸುತ್ತ ಮುತ್ತಲಿನ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಸಾವಿರಾರು ಬೋಟುಗಳನ್ನು ಮಳೆಗಾಲದಲ್ಲಿ ನಿಲ್ಲಿಸೋದೇ ಒಂದು ದೊಡ್ಡ ಸವಾಲು. ಈ ಸಮಸ್ಯೆಯನ್ನು ಬಗೆಹರಿಸೋದಿಕ್ಕೆ ಅಲ್ಲಲ್ಲಿ ಮೀನುಗಾರಿಕಾ ಬೋಟುಗಳನ್ನು ನಿಲ್ಲಿಸಲು ಮೀನುಗಾರಿಕಾ ಜಟ್ಟಿ ಮಾಡಲಾಗುತ್ತಿದೆ.

ಕಲ್ಮಾಡಿಯಲ್ಲಿಯೂ ಭಾರೀ ಗಾತ್ರದ ಜಟ್ಟಿಯೊಂದರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜಟ್ಟಿ ನಿರ್ಮಾಣದ ಕೆಲಸ ಭರದಿಂದ ಸಾಗುತ್ತಿದೆ. ಹತ್ತಾರು ಡ್ರಜ್ಜಿಂಗ್ ಮಷೀನುಗಳು ಕೊಳದ ಆಳದಲ್ಲಿರುವ ಕೆಸರು ಮತ್ತು ಮರಳನ್ನು ಬಗೆದು ಬಗೆದು ಹೊರ ಹಾಕುತ್ತಿವೆ. ಹೀಗೆ ಅಹೋ ರಾತ್ರಿಯಾಗಿ ದುಡಿಯುತ್ತಾ ಇದ್ದ ಮಷೀನುಗಳು ಇದ್ದಕ್ಕಿದ್ದಂತೆ ಕೆಲಸ ಮಾಡುವುದನ್ನು ನಿಲ್ಲಿಸಿ ಬಿಟ್ಟವು. ಗುತ್ತಿಗೆದಾರ ಮತ್ತು ಕಾರ್ಮಿಕರು ಈ ವಿಸ್ಮಯವನ್ನು ಕಂಡು ಬೆಚ್ಚಿಬಿದ್ದರು. ಮಷೀನೂಗಳು ಕೆಲಸ ನಿಲ್ಲಿಸಲು ಕಾರಣ ಏನು ಅಂದ್ರೆ…

ಅದು, ಕೊಳದ ಆಳದಲ್ಲಿದ್ದ ಭಾರಿ ವಸ್ತುವೊಂದು ಮಷೀನಿನ ಚಕ್ರಕ್ಕೆ ಸಿಲುಕಿದ್ದು ! ಈ ಭಾರೀ ಗಾತ್ರದ ವಸ್ತುವನ್ನು ಮೇಲಕ್ಕೆತ್ತಲು ಒಂದು ತಿಂಗಳು ಪ್ರಯತ್ನ ಪಡಲಾಯಿತು. ಆದರೆ ಆ ನಿಗೂಢ ವಸ್ತು ಮಾತ್ರ ಮೇಲೆ ಎಳೆದಷ್ಟು ಅಡಿಗೆ ಜಾರುತ್ತಿತ್ತು. ತಾಳ್ಮೆ ಕಳೆದುಕೊಂಡ ಗುತ್ತಿಗೆದಾರರು ಹೊಸ ಹಿಟಾಚಿಯೊಂದನ್ನು ಕೊಳ್ಳಕ್ಕೆ ಇಳಿಸಿದರು. ಹಿಟಾಚಿಯೇನೋ ಕೊಳ್ಳಕ್ಕೆ ಇಳಿಯಿತು. ಆದರೆ, ಆ ವಸ್ತುವನ್ನು ಮಾತ್ರ ಅಲ್ಲಾಡಿಸಲು ಸಾಧ್ಯವಾಗಲಿಲ್ಲ. ಬದಲಾಗಿ, ಆ ಹೊಸ ಹಿಟಾಚಿ ಸಹ ಇಂಚಿಂಚಾಗಿ ನೀರಲ್ಲಿ ಮುಳುಗಿ ಜಲ ಸಾಮಾಧಿಯಾಗಿ ಹೋಯಿತು.

ಎರಡು ಹಿಟಾಚಿಗಳು ನೀರಲ್ಲಿ ಮುಳುಗುತ್ತಿದ್ದಂತೆ ಮೇಲೆ ಇದ್ದ ಜನ ಬೆವರಿ ಹೋದರು. ಈ ಕೊಳ್ಳದಲ್ಲಿ ಹುದುಗಿರುವ ಆ ಭಾರಿ ವಸ್ತು ಸಾಮಾನ್ಯದ್ದಲ್ಲ. ಇದರ ಹಿಂದೆ ಅದ್ಯಾವುದೋ ಅಲೌಕಿಕ ಶಕ್ತಿ ಅಡಗಿರಬಹುದು ಎಂದು ತಲೆಗೊಬ್ಬರು ಮಾತನಾಡತೊಡಗಿದರು. ಆಧುನಿಕ ಭಾರೀ ಯಂತ್ರಗಳು ಕೈ ಚೆಲ್ಲಿ ಕುಳಿತ ನಂತರ, ಮೊಗವೀರರು ಹಡಗು ಎಳೆಯಲು ಬಳಸುವ ಸಾಂಪ್ರದಾಯಿಕ ಗಾಣದ ಯಂತ್ರವನ್ನು ತರಲಾಯಿತು.

ಈ ಗಾಣದ ಯಂತ್ರವೇನೂ ಸುಮ್ಮನೆ ಅಲ್ಲ. ಮಲೆನಾಡಿನ ಘಾಟಿಗಳಲ್ಲಿ ಉರುಳಿ ಬೀಳುವ ಭಾರೀ ಗಾತ್ರದ ಟ್ಯಾಂಕರುಗಳನ್ನು ಲಾರಿಗಳನ್ನು ರೆಪ್ಪೆ ಮಿಟುಕಿಸುವಷ್ಟರಲ್ಲಿ ಬೆಂಕಿ ಪೊಟ್ಟಣದಂತೆ ಎತ್ತಿ ಇಡುವ ಅದ್ಭುತ ಯಂತ್ರ. ಹತ್ತು ಇಪ್ಪತ್ತು ಬಲಾಢ್ಯ ವ್ಯಕ್ತಿಗಳು ಸೇರಿ ಈ ತಂತ್ರವನ್ನು ಬಳಸಿ ಯಾವ ವಸ್ತುಗಳನ್ನಾದರೂ ಅನಾಮತ್ತಾಗಿ ಮೇಲಕ್ಕೆ ಎತ್ತಿ ಬಿಡುತ್ತಾರೆ. ಆದರೆ ಈ ಗಾಣಕ್ಕೂ ಈ ಕೊಳ್ಳದಲ್ಲಿ ಹುದುಗಿರುವ ಘನ ವಸ್ತುವನ್ನು ಅಲುಗಾಡಿಸೋದು ಅಸಾಧ್ಯವಾಗಿ ಹೋಯ್ತು. ಅಷ್ಟಕ್ಕೂ ಆ ಕೊಳ್ಳದಲ್ಲಿ ಅಡಗಿ ಕೂತ ನಿಗೂಢವಾದ ವಸ್ತುವಾದರೂ ಏನು…? ಕೂತೂಹಲ ಎಲ್ಲೆಲ್ಲೂ ಹೆಡೆ ಬಿಚ್ಚಿತ್ತು. ಉತ್ತರ ಮಾತ್ರ ಯಾರಿಗೂ ಸಿಗಲಿಲ್ಲ. ಈ ವಸ್ತುವನ್ನು ಮೇಲಕ್ಕೆ ಎಳೆಯಲು ದೈವ ದೇವರು ಏನಾದರೂ ಅಡ್ಡಿ ಪಡಿಸಿದವೇ ? ಗೊತ್ತಿಲ್ಲ. ಅದಕ್ಕಾಗಿ ಊರಿನ ಗ್ರಾಮ ದೇವರಿಗೆ, ದೈವಗಳಿಗೆ ಕೈ ಮುಗಿದು ಪ್ರಾರ್ಥನೆಯನ್ನು ಮಾಡಲಾಯಿತು. ಆದರೂ ಫಲಿತಾಂಶ ಮಾತ್ರ ಶೂನ್ಯ.

ಕೊಳ್ಳದ ಹೂಳೆತ್ತುವ ಕಾರ್ಯ ಆ ಅಗೋಚರ ವಸ್ತುವಿನ ಕಾರಣದಿಂದಾಗಿ ಅರ್ದಕ್ಕೆ ನಿಲ್ಲುವ ಸಾಧ್ಯತೆ ಇತ್ತು. ಅಲ್ಲದೆ ಗುತ್ತಿಗೆದಾರನ ಹೊಸ ಹಿಟಾಚಿಯೊಂದು ಜಲ ಸಮಾಧಿಯಾಗಿ ಹೋಗಿತ್ತು. ಇದೆಲ್ಲವನ್ನೂ ಗಮನಿಸಿದ ಸ್ಥಳಿಯರು, ಕಾರ್ಮಿಕರಿಗೆ ಒಂದು ಸಲಹೆಯನ್ನು ಕೊಟ್ಟರು. ಈ ಕೊಳ್ಳದ ಪಕ್ಕದಲ್ಲೇ ಇರುವ ದೈವವೊಂದಕ್ಕೆ ಕೈ ಮುಗಿದು ಪ್ರಾರ್ಥಿಸಿದರೆ ನಿಮ್ಮ ಕೆಲಸ ಆಗಬಹುದು ಎಂದರು. ಎಲ್ಲಾ ಮಾಡಿ ಕೈಸೋತು ಕುಳಿತಿದ್ದ ಗುತ್ತಿಗೆದಾರ ಕೂಡಲೇ ಆ ದೈವಸ್ಥಾನದ ಬಾಗಿಲಿಗೆ ಬಂದು, ಕೈ ಹಾಕಿದ ಕಾರ್ಯವನ್ನು ಜಯ ಮಾಡಿ ಕೊಡು ಎಂದು ಅರಿಕೆ ಮಾಡಿಕೊಂಡ. ಈತ ಅರಿಕೆ ಮಾಡಿದ್ದೇ ತಡ, ಕೊಳ್ಳದ ಆಳದಲ್ಲಿ ಕೊರಡಾಗಿ ಬಿದ್ದಿದ್ದ ಆ ವಸ್ತು ಭಾರಿ ಸಂಚಲನವೇ ಮೂಡಿತು. ಗಾಣದ ಸರಪಳಿಗಳು ಅದುರಿದವು. ನೀರಿನಲ್ಲಿ ಮುಳುಗಿ ಜಪ್ಪಯ್ಯಾ… ಅಂದ್ರ ಮೇಲೆ ಬಾರದಿದ್ದ ಆ ನಿಗೂಢ ವಸ್ತು, ಗಾಣದ ಸರಪಳಿಗೆ ಮೈ ಒಡ್ಡಿತು. ಆ ಭಾರಿ ವಸ್ತು ಇಂಚಿಂಚಾಗಿ ಮೇಲೆ ಬರತೊಡಗಿತು. ಆ ವಸ್ತು ಮೇಲೆ ಬರುತ್ತಿದ್ದಂತೆ ಎಲ್ಲರ ಕೂತೂಹಲಕ್ಕೆ ತೆರೆ ಬಿತ್ತು. ಕೊಳ್ಳದ ಆಳದಲ್ಲಿ ಅಡಗಿ ಗುತ್ತಿಗೆದಾರನನ್ನು, ಕಾರ್ಮಿಕರನ್ನು, ಜನರನ್ನು ಇನ್ನಿಲ್ಲದಂತೆ ಕಾಡಿದ ಆ ವಸ್ತು ಕೇವಲ ಒಂದು ಮರದ ತುಂಡು…

ಆದರೆ, ಇದು ಅಂತಿಂಥಾ ಮರದ ತುಂಡು ಅಲ್ಲ. ಸುಮಾರು ಮೂವತ್ತು ಮೀಟರ್ ಉದ್ದ ಇರುವ ದೈತ್ಯ ಗಾತ್ರದ ಹೆಬ್ಬಲಸಿನ ಮರ. ಅಷ್ಟಕ್ಕೂ ಈ ಹೆಬ್ಬಲಸಿನ ಮರವನ್ನು ಕೊಳದಲ್ಲಿ ಅಡಗಿಸಿ ಇಟ್ಟವರು ಯಾರು ? ಇದರ ಹಿಂದೆ ಇದೆ ಒಂದು ರೋಚಕ ಕತೆ… ಸುಮಾರು ೪೦೦ ವರ್ಷ ಹಿಂದಿನ ಮೈ ನವಿರೇಳಿಸುವ ದಂತ ಕತೆ.

ಹೆಬ್ಬಲಸಿನ ಮರದ ರೋಚಕ ಕಥೆ

ಈ ಉಪ್ಪು ನೀರಿನ ಕೊಳ್ಳಕ್ಕೆ ಇಷ್ಟು ದೊಡ್ಡ ಮರ ಬಂದಿದ್ದಾದರೂ ಎಲ್ಲಿಂದ ಅನ್ನೋದೇ ಎಲ್ಲರ ಪ್ರಶ್ನೆ. ಬಂದಿದ್ದರೂ, ಇಷ್ಟು ಕಾಲ ಯಾಕೆ ಯಾರ ಕಣ್ಣಿಗೂ ಬೀಳಲಿಲ್ಲ ಎನ್ನೊದು ಇನ್ನೊಂದು ಪ್ರಶ್ನೆ. ಈ ಮರವನ್ನು ಗರಗಸದಿಂದ ಕಡಿದ ಗುರುತುಗಳಿಲ್ಲ. ನೂರಾರು ವರ್ಷ ಸಂದರೂ ಈ ಮರ ಎಳ್ಳಷ್ಟೂ ಕೊಳೆತು ಹೋಗಿಲ್ಲ. ಒಟ್ಟಿನಲ್ಲಿ ಸ್ಥಳಿಯರ ಪಾಲಿಗೆ ಈ ಮರ ಒಂದು ಅಚ್ಚರಿಯ ಕೇಂದ್ರ ಬಿಂದು ಆಗಿದೆ.

ಕಲ್ಮಾಡಿಯ ಕೊಳ್ಳದಿಂದ ಮೇಲೆ ಬಿದ್ದ ಈ ಮರದ ಹಿನ್ನೆಲೆ ಸಿಗಬೇಕಾದರೆ ನಾವು ಬ್ರಿಟೀಷರ ಕಾಲಕ್ಕೆ ಹೋಗಬೇಕು. ಸುಮಾರು ೪೦೦ ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಬಗ್ಗು ಮೊಯ್ಲ್ದಿಎಂಬ ಹೆಂಗಸೊಬ್ಬಳು ಬದುಕುತ್ತಿದ್ದಳಂತೆ. ಈ ಹೆಣ್ಣಿಗೆ ನಾಲ್ಕು ಜನ ಅಣ್ಣಂದಿರಿದ್ದರಂತೆ. ಬಗ್ಗು ಕೇಳಿದ ಪ್ರತಿಯೊಂದು ಆಸೆಯನ್ನೂ ಆಕೆಯ ಅಣ್ಣಂದಿರು ಈಡೇರಿಸುತ್ತಿದ್ದರಂತೆ. ಒಂದು ದಿನ ಬಗ್ಗು ತನ್ನ ಅಣ್ಣಂದಿರ ಬಳಿ ತನಗೆ ಎಣ್ಣೆ ತಯಾರಿಸುವ ಗಾಣವೊಂದನ್ನು ಮಾಡಿಕೊಡುವಂತೆ ಕೇಳಿಕೊಳ್ಳುತ್ತಾಳೆ.

ಅಸಲಿಗೆ ಈ ಮೊಯ್ಲಿ ಜನಾಂಗದವರ ಮೂಲ ಕಸುಬೇ ಗಾಣದಿಂದ ಎಣ್ಣೆ ತೆಗೆಯೋದು. ತಂಗಿಯ ಇಚ್ಛೆ ಈಡೇರಿಸಲು ನಾಲ್ವರು ಅಣ್ಣಂದಿರು ಗಾಣ ತಯಾರಿಸಲು ಮರದ ಹುಡಕಾಟ ನಡೆಸುತ್ತಾರೆ. ಆಗ ಇವರಿಗೆ ಗಾಣ ತಯಾರಿಸುವಷ್ಟು ದೊಡ್ಡ ಗಾತ್ರದ ಮರ ಮರ್ಣೆ ಎಂಬಲ್ಲಿ ಸಿಗುತ್ತದೆ. ಈ ಮರವನ್ನು ನಾಲ್ವರು ಅಣ್ಣಂದಿರು ನಾಲ್ಕು ತುಂಡಾಗಿ ಕಡಿದು ಪಕ್ಕದ ನದಿಗೆ ದೂಡಿ ಬಿಡುತ್ತಾರೆ. ನದಿಯ ನೀರಿನಲ್ಲಿ ತೇಲಿ ಬಂದ ಆ ನಾಲ್ಕು ಮರದ ತುಂಡುಗಳು ಕಲ್ಮಾಡಿಯವರೆಗೂ ತೇಲಿಕೊಂಡು ಬರುತ್ತವೆ. ಕಲ್ಮಾಡಿಯ ಗುಂಡಿಯಲ್ಲಿ ಈ ನಾಲ್ಕೂ ಮರದ ತುಂಡುಗಳು ನೋಡು ನೋಡುತ್ತಿದ್ದಂತೆ ಅದೃಶ್ಯವಾಗಿ ಬಿಡುತ್ತವೆ.

ಈ ವಿಸ್ಮಯವನ್ನು ಕಂಡು ಎಲ್ಲರೂ ಬೆಚ್ಚಿ ಬೀಳುತ್ತಾರೆ. ಆಗ ನಾಲ್ವರು ಅಣ್ಣಂದಿರು ಮತ್ತು ಬಗ್ಗು ಮೊಯ್ಲ್ದಿ ಸೇರಿ ಜೋಯಿಸರ ಮೂಲಕ ಈ ವಿಚಿತ್ರ ಘಟನೆಯನ್ನು ತಿಳಿಸುತ್ತಾರೆ. ಆಗ ಜೋತಿಷ್ಯರು ಈ ಮರದ ಹಿಂದೆ ಒಂದು ಭಾರೀ ಶಕ್ತಿಯೂ ನಿಮ್ಮ ಹಿಂದೆ ಬಂದಿದೆ ಎನ್ನುತ್ತಾರೆ. ಆ ಶಕ್ತಿಯನ್ನು ನಂಬದೆ ಬೇರೆ ವಿಧಿ ಇಲ್ಲ ಎನ್ನುತ್ತಾರೆ. ಆಗ ಬಗ್ಗು, ಕಲ್ಮಾಡಿಯ ತೀರಕ್ಕೆ ಬಂದು ನನ್ನ ಅಣ್ಣಂದಿರು ಕಡಿದು ನದಿಗೆ ಹಾಕಿದ ಮರದ ಬೆಂಬತ್ತಿ ನಿಜವಾಗಿಯೂ ಶಕ್ತಿಯೊಂದು ಬಂದಿದ್ದರೆ ಆ ಶಕ್ತಿ ಮರದ ತುಂಡುಗಳನ್ನು ನೀರಿನಿಂದ ನೆಲಕ್ಕೆ ಹಾಕಬೇಕು ಎನ್ನುತ್ತಾಳೆ.

ಬಗ್ಗು ಈ ಮಾತನ್ನು ಹೇಳುತ್ತಿದ್ದಂತೆ, ಭಾರೀ ಗಾತ್ರದ ಸುಂಟರಗಾಳಿಯೊಂದು ಕಲ್ಮಾಡಿಯ ಕೊಳ್ಳದಿಂದ ಮೇಲೇಳುತ್ತದೆ. ಆ ಮೂರು ಮರದ ತುಂಡುಗಳೂ ಗಾಳಿಯೊಂದಿಗೆ ತಿರುಗುತ್ತಾ ಮೇಲೆದ್ದು ಪಕ್ಕದ ಗದ್ದೆಗೆ ಬೀಳುತ್ತವಂತೆ. ಈ ಘಟನೆಯನ್ನು ಕಂಡು ಮೂಕ ವಿಸ್ಮಿತರಾದ ಬಗ್ಗು ಮತ್ತು ಆಕೆಯ ಅಣ್ಣಂದಿರು ಆ ಶಕ್ತಿಯನ್ನು ನಂಬಿ ಅದನ್ನು ಆರಾಧಿಸಿಕೊಂಡು ಬರುತ್ತಾರೆ. ಆ ಮಹಾ ಶಕ್ತಿಯೇ ದೈವ ಬಗ್ಗು ಪಂಜುರ್ಲಿ…

ಬಗ್ಗು ಎಂಬ ಸತ್ಯದ ಹೆಣ್ಣು ಮಗಳ ಭಕ್ತಿಗೆ ಒಲಿದು ಬಂದ ದೈವ ಇದು. ಈ ದೈವದ ಸಾನಿಧ್ಯದಲ್ಲಿ ಅಂದಿನಿಂದ ಇಂದಿನವರೆಗೆ ಬೆಚ್ಚಿ ಬೀಳಿಸುವ ನೂರಾರು ಘಟನೆಗಳು ನಡೆದಿವೆ. ಸತ್ತವನನ್ನು ಇನ್ನೇನು ಚಟ್ಟಕ್ಕೆ ಇಡಬೇಕು ಎನ್ನುವಷ್ಟರಲ್ಲಿ ಈ ದೈವ ಎದ್ದು ಕೂರಿಸಿದ ಉದಾಹರಣೆ ೪೦ ವರ್ಷದ ಹಿಂದೆ ನಡೆದಿದೆ.

ದೃಢವಾದ ಮನಸ್ಸಿನಿಂದ ಇಲ್ಲಿ ಪ್ರಾರ್ಥಿಸಿದವರನ್ನು ದೈವ ಕೈಬಿಟ್ಟ ಘಟನೆ ಈ ತನಕ ಸಿಕ್ಕಿಲ್ಲ. ಕಡಲಿಗೆ ಇಳಿಯುವ ಮೀನುಗಾರರು ಇಲ್ಲಿನ ಪಂಜುರ್ಲಿಯ ಪ್ರಸಾದವನ್ನು ಕೊಂಡು ಹೋಗುವುದು ಹಿಂದಿನಿಂದ ಬಂದ ಸಂಪ್ರದಾಯ. ಆ ಕಾಲದಲ್ಲಿ ಬಗ್ಗುಮೊಯ್ಲ್ದಿ ಮರ್ಣೆಯಿಂದ ತಂದ ಮರದ ಮೂರು ತುಂಡುಗಳನ್ನು ಬಳಸಿ ಎಣ್ಣೆಯ ಗಾಣ, ದೈವದ ಮಣೆ ಮಂಚ, ದೈವಸ್ಥಾನದ ಹೆಬ್ಬಾಗಿಲು ಎಲ್ಲವನ್ನೂ ಮಾಡಿಸಿದ್ದಾಳೆ.

ಅಚ್ಚರಿಯ ಸಂಗತಿ ಎಂದರೆ, ಈ ಬಗ್ಗು ಮೊಯ್ಲ್ದಿಪಂಜುರ್ಲಿಯ ಕೃಪೆಯಿಂದ ಎರಡು ಜೀವಂತ ಸರ್ಪಗಳನ್ನು ಹಡೆದಿದ್ದಳಂತೆ. ದೈವಾರಾಧನೆಯ ದಂತಕತೆಗಳಲ್ಲೇ ಇಂಥ ಇನ್ನೊಂದು ಉದಾಹರಣೆಗಳು ನಮಗೆ ಸಿಗಲಾರದು. ಬ್ರಿಟೀಷರು ಗೇಣಿ ನೀಡಲಿಲ್ಲ ಎಂಬ ಕಾರಣಕ್ಕೆ ಬಗ್ಗುವನ್ನು ಬಂಧಿಸಿದ ಸಂದರ್ಭದಲ್ಲಿ ಇದೇ ಎರಡು ಹಾವುಗಳು ತಮ್ಮ ಹೆಡೆಯನ್ನು ಅರಳಿಸಿ ತಾಯಿಗೆ ನೆರಳನ್ನು ನೀಡಿದ್ದವಂತೆ. ಈ ದೃಶ್ಯ ಕಂಡು ಮೂಕ ವಿಸ್ಮಿತರಾದ ಬ್ರಿಟೀಷ್ ಅಧಿಕಾರಿಗಳು ಬಗ್ಗು ಮೊಯ್ಲ್ದಿಯನ್ನು ಕೂಡಲೇ ಬಿಡುಗಡೆಗೊಳಿಸಿ ಎಕರೆಗಟ್ಟಲೆ ಭೂಮಿಯನ್ನು ಈಕೆಯ ಹೆಸರಿಗೆ ಮಾಡಿಬಿಟ್ಟರಂತೆ.

ಆ ಜಾಗ ಇತ್ತೀಚಿನವರೆಗೂ ಬಗ್ಗು ಮೊಯ್ಲ್ದಿಯ ಕುಟುಂಬಿಕರ ಬಳಿ ಇತ್ತು ಎನ್ನಲಾಗುತ್ತದೆ. ಇಲ್ಲಿನ ನಾಗ ಬನದಲ್ಲಿ ಇಂದಿಗೂ ಕೆಲವು ಬಂಗಾರದ ಬಣ್ಣದ ಹಾವುಗಳು ಸ್ವಚ್ಛಂದವಾಗಿ ತಿರುಗಾಡುತ್ತಿರುತ್ತವೆ. ಬಗ್ಗು ಬಾಳಿ ಬದುಕಿದ ಮನೆ ಇಂದಿಗೂ ಇದೆ. ಆಕೆಯ ವಂಶಸ್ಥರು ಇಂದಿಗೂ ಈ ಕ್ಷೇತ್ರದಲ್ಲಿ ಇದ್ದಾರೆ. ಅಂದಿನ ಕಾಲದಲ್ಲಿ ಬಗ್ಗು ನಿರ್ಮಿಸಿದ ಎಣ್ಣೆಯ ಗಾಣವನ್ನು ಇಂದಿಗೂ ಉಳಿಸಿಕೊಂಡು ಬರಲಾಗಿದೆ.

ಬಗ್ಗು ಮೊಯ್ಲ್ದಿಅದೆಷ್ಟು ಕಾರಣೀಕವನ್ನು ಹೊಂದಿದ್ದಳೆಂದರೆ, ಇಂದಿಗೂ ಈ ಇಡೀ ಪ್ರದೇಶವನ್ನು ಆಕೆಯ ಹೆಸರಿನಿಂದಲೇ ಕರೆಯುತ್ತಾರೆ. ಈ ಪ್ರದೇಶದ ಹೆಸರು ಬಗ್ಗು ಮುಂಡ. ಬಗ್ಗು ಮುಂಡದಲ್ಲಿ ಪ್ರತೀ ಸಂಕ್ರಾತಿಯ ದಿನ ಪಂಜುರ್ಲಿ ದೈವದ ಸಂದರ್ಶನ ನಡೆಯುತ್ತದೆ. ಕಳೆದ ಎರಡು ತಿಂಗಳ ಹಿಂದೆ ದರ್ಶನದಲ್ಲಿ ದೈವ ಈ ಮರದ ಬಗ್ಗೆ ಸುಳಿವು ನೀಡಿತ್ತು. ಇದಾದ ಒಂದೇ ತಿಂಗಳಲ್ಲಿ ಈ ಘಟನೆ ನಡೆದಿದೆ.

ಮರ್ಣೆಯಿಂದ ಒಂದು ಮರದ ಬೆನ್ನು ಹಿಡಿದು ಪಂಜುರ್ಲಿ ದೈವ ಕಲ್ಮಾಡಿಗೆ ಬಂದ ಬಗ್ಗೆ ಪಾಡ್ದನಗಳಲ್ಲಿ ಉಲ್ಲೇಖವಿದೆ. ಆ ಮರವನ್ನು ನಾಲ್ಕು ತುಂಡು ಮಾಡಿ ನದಿಗೆ ದೂಡಲಾಗಿತ್ತು ಎಂದು ಚರಿತ್ರೆ ಸಾರುತ್ತದೆ. ಆದರೆ ಕಲ್ಮಾಡಿಯಲ್ಲಿ 3 ಮರದ ತುಂಡುಗಳನ್ನು ಮಾತ್ರ ಮೇಲಕ್ಕೆ ಎತ್ತಲಾಯಿತು ಎಂದು ದೈವಾವೇಶದ ಸಂದರ್ಭದಲ್ಲಿ ಇಂದಿಗೂ ಹೇಳಲಾಗುತ್ತದೆ. ಹಾಗಾದರೆ ಕೊಳ್ಳದಲ್ಲಿ ಬಾಕಿ ಉಳಿದಿರುವ ಒಂದು ತುಂಡು ಇದೇ ಆಗಿರಬಹುದೇ…? ಇತಿಹಾಸವನ್ನು ಕೇವಲ ಸಾಕ್ಷಿ ಆಧಾರಗಳಿಂದ ಮಾತ್ರ ಸಿದ್ದಗೊಳಿಸಲು ಸಾಧ್ಯ ಎನ್ನುವವರು ಬಗ್ಗು ಮೊಯ್ಲ್ದಿಯ ಕತೆಗೆ ಇದನ್ನು ಸಾಕ್ಷಿ ಎಂದು ಪರಿಗಣಿಸಬಹುದು.

ಒಟ್ಟಿನಲ್ಲಿ ಈ ಬಗ್ಗೆ ನಿಖರವಾದ ಮಾಹಿತಿ ಬೇಕಿದ್ದರೆ ನಂಬಿಕೆಗಳನ್ನು ಪಕ್ಕಕ್ಕಿಟ್ಟು ಈ ಮರದ ಮೇಲೆ ಒಂದು ವೈಜ್ಞಾನಿಕ ಸಂಶೋಧನೆ ನಡೆಸುವ ಅಗತ್ಯವಿದೆ. ೪೦೦ ವರ್ಷದ ಹಿಂದೆ ಮರ್ಣೆ ಗ್ರಾಮದಿಂದ ಕಲ್ಮಾಡಿಗೆ ನದಿ ಮಾರ್ಗದಲ್ಲಿ ಹರಿದು ಬಂದ ಈ ಮರ, ೪ ಶತಮಾನಗಳ ಕಾಲ ಈ ಗುಂಡಿಯಲ್ಲೇ ಹರಿಯದೇ ಹೇಗೆ ನಿಂತಿತು ಎನ್ನುವುದೇ ಎಲ್ಲರನ್ನೂ ಕಾಡುವ ಪ್ರಶ್ನೆ.

ಭಾರೀ ಗಾತ್ರದ ಮರ ಆಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಮರದ ವ್ಯಾಪಾರಿಗಳು ಬಂದು ಈ ಮರಕ್ಕೆ ಬೆಲೆ ಕಟ್ಟಿ ಹೋಗುತ್ತಿದ್ದಾರೆ. ಆದರೆ ಗ್ರಾಮಸ್ಥರು ಮಾತ್ರ ಈ ಮರದ ಸಹವಾಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕಲ್ಮಾಡಿಯ ದೈವದ ಕತೆಗಳೇ ಹಾಗಿದೆ. ದರ್ಶನದಲ್ಲಿ ಪಂಜುರ್ಲಿ ‘ಈ ಮರ ನನಗೆ ಸೇರಿದ್ದು, ಯಾರಾದರೂ ಕೊಂಡು ಹೋದರೆ ಬೆನ್ನು ಹಿಡಿಯದೇ ಬಿಡುವುದಿಲ್ಲ’ ಎಂದಿದ್ದಾನಂತೆ. ಪಂಜುರ್ಲಿಯ ಎಚ್ಚರಿಕೆಗೆ ಸರಕಾರಿ ಅಧಿಕಾರಿಗಳು ಮತ್ತು ಟಿಂಬರ್ ಮರ್ಚಂಟ್‌ಗಳು ಬಗ್ಗುತ್ತಾರೋ ಇಲ್ವೋ ಗೊತ್ತಿಲ್ಲ. ಒಟ್ಟಿನಲ್ಲಿ ಭೂತಾರಾಧನೆಯ ದಂತ ಕತೆಗಳಿಗೆ ಪುರಾವೆಯೊಂದು ಸಿಕ್ಕಿರುವುದು ಹಲವು ಜಾನಪದಾಸಕ್ತರನ್ನು ಆಕರ್ಷಿಸಿದೆ………..

 

Reference :

Devadiga Yuva Sanghataney Udupi

About Pavanesh D

Pavanesh D

Leave a Reply