Home / All / Dravida Bhase Otada Atadali Tulu Hende Bididyake

Dravida Bhase Otada Atadali Tulu Hende Bididyake

ದ್ರಾವಿಡ ಭಾಷೆಗಳ ಓಟದ ಆಟದಲ್ಲಿ ತುಳು ಹಿಂದೆ ಬಿದ್ದಿದ್ದೇಕೆ?

ಭಾಷೆ ಜನ ಸಮುದಾಯದ ಸ್ವತ್ತಾದರೂ, ಅದು ರಾಜಾಶ್ರಯವಿಲ್ಲದಿದ್ದರೆ ಹೇಗೆ ಬಳಲುತ್ತದೆ ಎಂಬುದಕ್ಕೆ ಬಹುಶಃ ತುಳು ಒಂದು ಜ್ವಲಂತ ಉದಾಹರಣೆ. ಅದೇ ರೀತಿ ರಾಜಾಶ್ರಯ ವಿಲ್ಲದಿದ್ದರೂ ಜನಸಮುದಾಯದ ಉಸಿರಾಗಿದ್ದರೆ ಹೇಗೆ ಭಾಷೆ ಸೀಮಿತ ಪ್ರದೇಶದಲ್ಲೂ ಉಸಿರಾಡುತ್ತದೆ ಎಂಬುದಕ್ಕೂ ತುಳು ಮತ್ತೊಂದು ಉದಾಹರಣೆ.

ಹೇಳಿ ಕೇಳಿ ದ್ರಾವಿಡ ಭಾಷೆಗಳಲ್ಲಿ ಮೊದಲು ಸ್ವತಂತ್ರಗೊಂಡ ಭಾಷೆ ತುಳು. ಅಂದರೆ ತಮಿಳು, ಕನ್ನಡಕ್ಕಿಂತಲೂ ಪ್ರಾಚೀನ ಭಾಷೆ ತುಳು. ದೇಶದ ಇತರೆಲ್ಲ ಭಾಷೆಗಳು ಸಂಸ್ಕೃತದಿಂದ ಹೇರಳ ‘ಆಮದು’ ಮಾಡಿಕೊಂಡಿದ್ದರ ನಡುವೆಯೂ ಇಂಥ ಆಮದು ವ್ಯವಹಾರ ಮಾಡದೆಯೇ ತನ್ನದೇ ಶಬ್ದ ಸಂಪತ್ತುಗಳನ್ನು ಉಳಿಸಿ ಕೊಂಡೇ ಬಂದಿರುವ ಭಾಷೆ. ಪಂಚ ದ್ರಾವಿಡ ಭಾಷೆಗಳ ಓಟದಲ್ಲಿ ತಮಿಳು, ಕನ್ನಡ, ತೆಲುಗು, ಮಲಯಾಳಂ ಭಾಷೆಗಳಿಗಿಂತ ಮೊದಲು ಸ್ವತಂತ್ರಗೊಂಡರೂ, ಆರಂಭದಿಂದ ಇಂದಿನವರೆಗೂ ರಾಜಾ ಶ್ರಯದ ಆಸರೆಯಿಂದ ವಂಚಿತಗೊಳ್ಳುತ್ತಲೇ ಬದುಕಬೇಕಾದ ದುರದೃಷ್ಟವಂತೆ ಈ ‘ತುಳುವಪ್ಪೆ’. ತನ್ನ ನಾಲ್ಕು ಸೋದರ ಭಾಷೆಗಳು ರಾಜ್ಯಾಡಳಿತ ಭಾಷೆಯಾಗಿದ್ದರೂ, ಅಷ್ಟೇ ಶ್ರೀಮಂತಿಕೆ ಹೊಂದಿರುವ ತುಳುವಿಗೆ ಈಗಲೂ ಉಪಭಾಷೆಯ ಸ್ಥಾನ! ಸೋದರ ಭಾಷೆಗಳು ‘ಅಭಿಜಾತ’ ಸ್ಥಾನ ಅಲಂಕರಿಸಿಕೊಂಡು ಸಂಭ್ರಮಿಸುತ್ತಿರಬೇಕಾದರೆ ತನ ಗಿನ್ನೂ ಕನಿಷ್ಠ ಸಂವಿಧಾನದ ಎಂಟನೇ ಪರಿಚ್ಛೇದಲ್ಲೂ ಸ್ಥಾನ ಸಿಗದ ಬೇಸರ. ಸ್ವಂತ ಲಿಪಿಯಿದ್ದರೂ, ‘ಲಿಪಿಯಿಲ್ಲದ ಭಾಷೆ’ ಎಂಬ ಹೀಯಾಳಿಕೆಯ ಮಾತನ್ನು ಪದೇಪದೆ ಕೇಳಿಸಿಕೊಳ್ಳಬೇಕಾದ ಅವಮಾನ!

ತುಳುವಿನ ದುರಂತ ಇರುವುದೇ ಇಲ್ಲಿ. ಒಂದು ಕಡೆ ಸ್ವತಃ ತುಳುವರಿಗೇ ತಮ್ಮ ಭಾಷೆಯ ಇತಿಹಾಸದ ಬಗ್ಗೆ ಸಂಪೂರ್ಣ ಅರಿ ವಿಲ್ಲ. ಇನ್ನೊಂದು ಕಡೆ ತುಳುವನ್ನು ತಮ್ಮ ಒಡಲಲ್ಲೇ ಇಟ್ಟುಕೊಂಡಿರುವ ಕನ್ನಡಿಗರಿಗೆ ತುಳುವಿನ ಬಗ್ಗೆ ಮಾಹಿತಿ ಇಲ್ಲ. ‘ತುಳು’ ಪದದ ಅರ್ಥವೇ ಮೃದು ಎಂದು. ಇದು ತುಳುವರ ಸ್ವಭಾವಕ್ಕೂ ಅನ್ವರ್ಥವಾಗಿದೆಯೋ ಏನೋ, ಅಂತೂ ಭಾಷೆಗೆ ಸಿಗಬೇಕಾದ ಅರ್ಹ ಸ್ಥಾನಮಾನಗಳನ್ನು ಹೋರಾಡಿ ಪಡೆದುಕೊಳ್ಳುವ ಕೆಚ್ಚೆದೆಯನ್ನು ತುಳುವರಿನ್ನೂ ತೋರಿಸಿಲ್ಲ. ಅದಿನ್ನೂ ಕಾಡಿ ಬೇಡುವ ಹಂತದಲ್ಲೇ ಇರುವುದು ಸ್ಪಷ್ಟ.

ತುಳುವರ ಮುಖಗಳೇ ವಿಭಿನ್ನ. ಒಂದು ಕಡೆ ಆಡಳಿತ ಭಾಷೆ ಕನ್ನಡ. ಮತ್ತೊಂದು ಕಡೆ ರಕ್ತದಲ್ಲಿ ಬಂದಿರುವ ತುಳು. ಇನ್ನೊಂದು ಕಡೆ ಗ್ಲೋಬಲೈಸೇಶನ್ ಫಲವಾಗಿ ಮೆರೆಯುತ್ತಿರುವ ಇಂಗ್ಲಿಷ್. ಮಗದೊಂದು ಕಡೆ ಮುಂಬಯಿ ಸಂಪರ್ಕದ ಫಲವಾಗಿ ಬಳುವಳಿ ಯಾಗಿ ಬಂದಿರುವ ಹಿಂದಿ. ಹೇಳಿ ಕೇಳಿ ಶಿಕ್ಷಣ ಕ್ಷೇತ್ರದಲ್ಲಿ ತುಳುನಾಡು ಮುಂಚೂಣಿಯಲ್ಲಿರುವ ಪ್ರದೇಶ. ಆಧುನಿಕತೆಯ ಎಲ್ಲ ಆಯಾಮ ಗಳನ್ನು ಬಹುಬೇಗ ಅರಗಿಸಿಕೊಂಡ ಜನ ಇಲ್ಲಿನವರು. ಅನ್ನದಿಂದ ಚಿನ್ನದವರೆಗೆ ವೈಭೋಗದ ಯಾವ ಆಯಾಮವನ್ನೂ ಬಿಡದೇ ಅನುಭವಿಸುವ ಮಂದಿ. ಅಷ್ಟರಮಟ್ಟಿಗೆ ತುಳುನಾಡು ಆರ್ಥಿಕ, ಶೈಕ್ಷಣಿಕ, ವೈದ್ಯಕೀಯ, ವ್ಯವಹಾರಿಕ, ಔದ್ಯಮಿಕವಾಗಿ ಶ್ರಿಮಂತ. ಬದುಕಿನಲ್ಲಿ ಎಲ್ಲವೂ ಬೇಕು, ಎಲ್ಲರೂ ಬೇಕು ಎಂಬ ಸಿದ್ಧಾಂತ. ಅಂತೆಯೇ ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಸ್ವಭಾವ.

ಭಾಷೆಯ ವಿಚಾರದಲ್ಲೂ ಆಗಿದ್ದು ಹೀಗೆ. ತುಳುವರಾಗಿದ್ದರೂ ಅದು ಬಿಟ್ಟು ಬೇರೆ ಭಾಷೆ ಬೇಡ ಎಂಬ ಮೊಂಡು ಹಠ ಯಾವತ್ತೂ ಮಾಡಿದವರಲ್ಲ. ಕನ್ನಡ ಮಾತೃಭಾಷೆಯಲ್ಲದಿದ್ದರೂ ಕರ್ನಾಟಕದ ಅಂಗವಾಗಿದ್ದುಕೊಂಡು ಕನ್ನಡದ ಸೇವೆ ಸಾಕಷ್ಟು ಮಾಡಿದವರು, ಮಾಡುತ್ತಲೇ ಬಂದವರು. ಜತೆಯಲ್ಲೇ ಕೊಂಕಣಿ, ಬ್ಯಾರಿ ಭಾಷೆಗಳನ್ನೂ ಪೋಷಿಸಿದವರು. ‘ಮಂಗ್ಳೂರು ಜನರಿಗೆ ಕನ್ನಡ ಮಾತಾಡಲು ಬರಲ್ಲ ಕಣ್ರೀ..’ ಎಂಬ ಹೀಯಾಳಿಕೆ ಬಂದಾಗಲೂ ನೊಂದುಕೊಂಡವರಲ್ಲ. ತಮ್ಮದೇ ಮಂಗಳೂರು ಶೈಲಿಯಲ್ಲಿ ಕನ್ನಡ ಮಾತನಾಡಿದವರು. ‘ನೋಡಿ ಸ್ವಾಮೀ.. ನಾವೇನು ಕನ್ನಡವನ್ನು ಮಾತೃಭಾಷೆಯಾಗಿ ಕಲಿತವರಲ್ಲ.. ಶಾಲೆಗೆ ಹೋಗಿ ಕನ್ನಡ ಕಲಿತ ಮಂದಿ ನಾವು’ ಎಂದು ಯಾವತ್ತೂ ಇಲ್ಲಿನ ಜನ ದೊಡ್ಡ ಸ್ವರದಲ್ಲಿ ಸಮರ್ಥನೆ ಮಾಡಿಕೊಂಡದ್ದೂ ಇಲ್ಲ.

ಇಂಥ ಉದಾರತನವೇ ಮತ್ತೊಂದು ಕಡೆಗೆ ತುಳುವಿನ ದೈನ್ಯತೆಗೂ ಹೇತುವಾಗಿರುವುದು ಸುಳ್ಳಲ್ಲ. ರಾಜ್ಯಭಾಷೆ ಎಂಬ ಗೌರವದಿಂದ ಕನ್ನಡದ ಸೇವೆ ಮಾಡುವಲ್ಲಿ ಧಾರಾಳತನ ತೋರಿದ ತುಳುವರು, ತುಳುವನ್ನು ಮನೆಯಲ್ಲೇ ಇಟ್ಟು ಸಾಕಿದರು. ‘ನಾವು ತುಳುವರು.. ನಮ್ಮ ಭಾಷೆ ನಮಗೆ ಮೊದಲು’ ಎಂದು ಯಾವತ್ತೂ ಗರ್ಜಿಸಿ ದವರಲ್ಲ. ತಾವು ಜಗತ್ತಿನ ಮೂಲೆ ಮೂಲೆಗೆ ಹೋಗಿ ಮಿಂಚಿದರೂ, ಅಲ್ಲೆಲ್ಲ ತುಳುವನ್ನು ಕೊಂಡೊಯ್ದರೂ ಆ ಭಾಷೆಗೆ ಒಂದು ‘ಬ್ರ್ಯಾಂಡ್’ ಕೊಟ್ಟು ಜಗತ್ತಿನ ಅಂಗಣದಲ್ಲಿ ಮಿಂಚು ವಂತೆ ಮಾಡಲೇ ಇಲ್ಲ. ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಆಹಾರ, ಪದ್ಧತಿ, ನಂಬಿಕೆ ಎಲ್ಲದರಲ್ಲೂ ತುಳುವರಿಗೆ ಒಂದು ಸ್ಪೆಷಲ್ ಐಡೆಂಟಿಟಿ ಇದೆ ನಿಜ. ಆದರೆ ಈ ಅನನ್ಯತೆಯ ಮೂಲವಾದ ಭಾಷೆಯನ್ನು ವೇದಿಕೆಯ ಮೇಲೆ ವಿಜ್ರಂಭಿಸು ವಂತೆ ಮಾಡುವ ಕೆಲಸ ಮಾಡಲೇ ಇಲ್ಲ.

ಎಂಟುನೂರು ವರ್ಷಗಳ ಹಿಂದೆ ತುಳು ಲಿಪಿಯಲ್ಲೇ ಬರೆದ ಮಹಾಕಾವ್ಯ ಸಿಕ್ಕಿದ್ದರೂ, ಹನ್ನೆರಡನೇ ಶತಮಾನದಿಂದ ಹದಿನೇಳನೇ ಶತಮಾನದವರೆಗೆ ತುಳು ಲಿಪಿಯಲ್ಲೇ ತುಳು ಗ್ರಂಥಗಳು ರಚನೆಯಾಗಿದ್ದರೂ ಅದರ ಬಗ್ಗೆ ಹಮ್ಮೆ ಪಟ್ಟುಕೊಳ್ಳುವ, ಅದನ್ನು ಪ್ರಚಾರ ಮಾಡಿ ಭಾಷೆಯ ಬೆಲೆ ಹೆಚ್ಚಿಸುವ ಕೆಲಸ ಮಾಡಲೇ ಇಲ್ಲ. ಪರಿಣಾಮ ಈಗಲೂ ಹೆಚ್ಚಿನ ತುಳುವೇತರರಿಗೆ ತುಳುವಿಗೆ ಲಿಪಿ ಇದೆ ಎಂಬುದೇ ಗೊತ್ತಿಲ್ಲ. ಇದರಲ್ಲಿ ಅವರ ತಪ್ಪೂ ಇಲ್ಲ. ಯಾಕೆಂದರೆ ಸ್ವತಃ ತುಳುವರೇ ಬರವಣಿಗೆಯಲ್ಲಿ ತುಳು ಲಿಪಿ ಬಳಸುವುದು ಬಿಟ್ಟು ಆಗಲೇ ನಾಲ್ಕು ಶತಮಾನಗಳೇ ಕಳೆದಿವೆ.

ತುಳುವರೇ ಸೃಷ್ಟಿಸಿ ಬೆಳೆಸಿದ ‘ಏರ್ಯ ಎಳುತ್ತು’ ಲಿಪಿ ಆರೇಳು ಶತಮಾನಗಳ ಕೆಳಗೆ ತುಳು ಪುರೋಹಿತರ ಮೂಲಕ ಕೇರಳಕ್ಕೆ ಹೋಗಿದ್ದು, ಈ ಲಿಪಿಯ ಗೋಳಾಕಾರ ರಚನೆಗೆ ಮೋಹಿತರಾಗಿ ಮಲಯಾಳಿಗರು ‘ವೆಟ್ಟೆಳೆತ್ತು ಲಿಪಿ’ ಕೈಬಿಟ್ಟು ‘ಆರ್ಯ ಎಳುತ್ತ’ನ್ನೇ ತಮ್ಮದಾಗಿಸಿಕೊಂಡು ಅದನ್ನೇ ಪರಿಷ್ಕರಿಸಿ ಅಳವಡಿಸಿಕೊಂಡಿದ್ದು, ಈ ‘ಆರ್ಯ ಎಳುತ್ತು’ ಲಿಪಿಯೇ ‘ತುಳು- ಮಲಯಾಳ ಲಿಪಿ’ ಎಂಬು ದಾಗಿ ದೇಶೀಯ ಮತ್ತು ವಿದೇಶಿ ಭಾಷಾ ವಿಜ್ಞಾನಿಗಳು ಸಾರಿ ಸಾರಿ ಹೇಳಿದ್ದು, ಈ ಲಿಪಿಯಲ್ಲಿ ಬರೆದ ತುಳು ಗ್ರಂಥಗಳು, ತುಳು- ಸಂಸ್ಕೃತ ಭಾಷೆಯ ತಾಳೆ ಗರಿಗಳು ಸಾವಿರಾರು ಸಂಖ್ಯೆಯಲ್ಲಿ ಇವತ್ತಿಗೂ ಇದ್ದರೂ ‘ತುಳು ಲಿಪಿ’ ಎಂಬ ಅಸ್ಮಿತೆಯನ್ನು ಪುನರುತ್ಥಾನಗೊಳಿಸುವ ಕೆಲಸ ನಡೆದೇ ಇಲ್ಲ.

ತುಳುವೆಂಬ ಪ್ರಾಚೀನ ಭಾಷೆಯನ್ನು ತಮ್ಮ ಮನೆಯಲ್ಲೇ ಬೆಚ್ಚಗಿನ ಕಾವು ಕೊಟ್ಟು ಸಾಕುತ್ತಾಬಂದ ತುಳುವರಿಗೆ ತಮ್ಮ ಅಸ್ಮಿತೆಯನ್ನು ಜಾಗತಿಕವಾಗಿ ಕೊಂಡಾಡಲು, ‘ಬ್ರ್ಯಾಂಡ್’ ಹೆಸರಿನಲ್ಲಿ ಡೆವಲಪ್ ಮಾಡಲು ಅಡ್ಡಿಯಾಗುತ್ತಾ ಬಂದದ್ದು ‘ಅಡಿಯಾಳುತನ’. ತುಳು ನಾಡು ಎಂಬ ಕರಾವಳಿಯ ಪುಟ್ಟ ಸಾಮ್ರಾಜ್ಯ ಕ್ರಿಸ್ತಪೂರ್ವದಲ್ಲಿ ಶಾತವಾ ಹನರ ನೇರ ಆಳ್ವಿಕೆಯಲ್ಲಿದ್ದರೆ, ತದನಂತರ ಕದಂಬರು, ಚಾಲುಕ್ಯರು, ಹೊಯ್ಸಳರು, ವಿಜಯನಗರ, ನಾಯಕರು, ಮೈಸೂ ರಿನ ಸುಲ್ತಾನರು ಇತ್ಯಾದಿ ಸಂಸ್ಥಾನಗಳ ಕೆಳಗೆ ಬದುಕಿದ ನಾಡು. 1200 ವರ್ಷಗಳ ಅಲೂಪರು ತುಳುನಾಡನ್ನು ತುಳುನಾಡಿನ ನೆಲದಿಂದಲೇ ಆಳಿದ್ದರೂ ಅವರೆಂದೂ ಸ್ವತಂತ್ರ ಚಕ್ರವರ್ತಿಗಳಾಗಲೇ ಇಲ್ಲ. ಮಾಂಡ ಲೀಕರೇ ಆಗಿದ್ದರು. 12ನೇ ಶತಮಾನದ ನಂತರದ ಜೈನ ಅರಸೊತ್ತಿಗೆಗಳು ಕೂಡಾ ಇಂಥವೇ. ಬ್ರಿಟಿಷರ ಆಳ್ವಿಕೆಯಲ್ಲಿ ಮದ್ರಾಸ್ ಪ್ರಾಂತ್ಯದ ಅಡಿಯಾಳುತನ. ಹೀಗಾಗಿ ಇತಿಹಾಸದುದ್ದಕ್ಕೂ ಭಾಷೆಗೆ ವ್ಯಾವಹಾರಿಕ ಚೌಕಟ್ಟನ್ನು ಕೊಟ್ಟು ಬೆಳೆಸಿದ ತುಳುವರಿಗೆ, ರಾಜ್ಯಾಡಳಿತದಲ್ಲಿ ತಮ್ಮ ಭಾಷೆಯನ್ನು ಕಾಣಲು ಸಾಧ್ಯವಾಗಲೇ ಇಲ್ಲ. ಸ್ವಾತಂತ್ರ್ಯಾನಂತರ ಭಾಷಾವಾರು ಪ್ರಾಂತ್ಯ ರಚನೆಯಾದಾಗ, ತನಗಿಂತಲೂ ಪುಟ್ಟ ಪ್ರದೇಶವಾದ ಗೋವಾ ಕೊಂಕಣಿ ಹೆಸರಿನಲ್ಲಿ ಸ್ವತಂತ್ರ ರಾಜ್ಯವಾದರೂ ತುಳುನಾಡು ಕರ್ನಾಟಕ ಮತ್ತು ಕೇರಳದಲ್ಲಿ ಹಂಚಿ ಹೋಯಿತು.

ನಿರಂತರ ಅಡಿಯಾಳುತನದ ಹೊರತಾಗಿಯೂ ತುಳು ಭಾಷೆ ಮೂಲ ಸತ್ವದಲ್ಲೇ ಇನ್ನೂ ಉಳಿದುಕೊಂಡಿದ್ದರೆ ಅದಕ್ಕೆ ಮುಖ್ಯ ಕಾರಣ ಈ ಭಾಷೆಯೊಂದಿಗೆ ತಳುಕು ಹಾಕಿಕೊಂಡಿರುವ ಒಂದು ಸ್ವತಂತ್ರ ಸಂಸ್ಕೃತಿ. ಇದು ಕನ್ನಡ ಸಂಸ್ಕೃತಿಗಿಂತ ಸಂಪೂರ್ಣ ಭಿನ್ನ.

ನಾಲ್ಕು ಸೋದರ ಭಾಷೆಗಳ ಪ್ರಾದೇಶಿಕ ವಿಸ್ತಾರಕ್ಕಿಂತ ತುಳುನಾಡು ಸಣ್ಣದಾಗಿದ್ದರೂ, ಈ ಭಾಷೆಯ ಪ್ರಾಚೀನತೆ ಮತ್ತು ಶ್ರೀಮಂತಿಕೆ ಅವುಗಳಿಗಿಂತ ಕಮ್ಮಿಯಿಲ್ಲ ಎಂಬುದು ದೇಶೀಯ/ ವಿದೇಶೀಯ ಭಾಷಾ ವಿಜ್ಞಾನಿಗಳ ಸಂಶೋಧನೆಯಲ್ಲಿ ಸಾಬೀತಾಗಿದ್ದು, ಈ ಕುರಿತ ಜಾಗೃತಿ ತಡವಾದರೂ ತುಳುವರಿಗೆ ಮೂಡಿದ ಫಲವಾಗಿಯೇ ಕಳೆದ ಮೂರು ದಶಕಗಳಿಂದ ತುಳು ಮಾನ್ಯತೆಗಾಗಿ ಹೋರಾಟ ನಡೆಯುತ್ತಿದೆ. ಸಾತ್ವಿಕ ಎಲ್ಲೆ ಮೀರದೆ ನಡೆಯುತ್ತಿರುವ ಹೋರಾಟ ಸರಕಾರಗಳ ಕಿವಿಗೆ ‘ಅಪ್ಪಳಿಸಿಲ್ಲ’ ಎಂಬುದು ಇನ್ನೂ ತುಳುವಿಗೆ ಸಂವಿಧಾನದ ಎಂಟನೇ ಪರಿಚ್ಛೇದಲ್ಲಿ ಸ್ಥಾನ ಕೊಡಲು ಮೀನ ಮೇಷ ಎಣಿಸುತ್ತಿರುವುದರಲ್ಲೇ ಸಾಬೀತಾಗುತ್ತದೆ.

ತುಳುವರು ಇನ್ನೆಷ್ಟು ಸಮಯ ತಮ್ಮ ಪುಟ್ಟ (ಅರ್ಹ) ಬೇಡಿಕೆಗಾಗಿ ಅಂಗಾಲಾಚಬೇಕು? ಅವರ ಸಾತ್ವಿಕ ಹೋರಾಟವೇ ತಪ್ಪೇ? ಈ ಪ್ರಶ್ನೆಗೆ ಆಡತಾರೂಢರು ಬಹುಬೇಗ ಉತ್ತರಿಸಬೇಕು. ತುಳುವಿಗೆ ಮಾನ್ಯತೆ ಕೊಟ್ಟರೆ ಕನ್ನಡದ ಅಸ್ಮಿತೆಗೆ ಧಕ್ಕೆ ಆಗುತ್ತದೆ ಎಂಬ ಭಾವನೆ ಕನ್ನಡಿಗರಲ್ಲಿ ಇದ್ದರೆ ಅದಕ್ಕೆ ಅರ್ಥವೇ ಇಲ್ಲ. ಯಾಕೆಂದರೆ ತುಳುವರು ಹಾಗೇನಾದರೂ ತಮ್ಮ ಭಾಷೆಯ ಮೇಲೆ ಅಂಧಾಭಿಮಾನ ಇಟ್ಟುಕೊಂಡಿದ್ದರೆ ಇವತ್ತು ತುಳುನಾಡಿನಲ್ಲಿ ಕನ್ನಡ ಹುಲುಸಾಗಿ ಬೆಳೆಯುತ್ತಿರಲೇ ಇಲ್ಲ.

 

 

About Pavanesh D

Pavanesh D

Leave a Reply