Home / All / Dharma Jarandaya Daiva

Dharma Jarandaya Daiva

ಶ್ರೀ ಧರ್ಮ ಜಾರಂದಾಯ

ಭೂತಾರಾಧನೆ ತುಳುನಾಡಿನ ಮುಖ್ಯ ಆರಾಧನೆಗಳಲ್ಲಿ ಒಂದು. ಕೋಲ, ಬಂಡಿಜಾತ್ರೆ, ನೇಮ, ಕೆಂಡಸೇವೆ, ಮೈಮೆ, ಮೆಚ್ಚಿ, ಜಾಲಾಟ ಇವು ವಿವಿಧ ಪ್ರಕಾರಗಳು.ಶಾಸನಗಳಲ್ಲಿ ಹದಿನಾಲ್ಕನೇ ಶತಮಾನದಿಂದ ಈಚೆಗೆ ‘ಭೂತ’ದ ಬದಲಿಗೆ ‘ದೈವ’ಎಂಬ ಪದವೇ ಬಳಕೆಯಲ್ಲಿರುವುದು ಉಲ್ಲೇಖನೀಯ.ಈಗ ನಾನು ನೋಡಿಬಂದ ‘ಧರ್ಮ ಜಾರಂದಾಯ’ ಎಂಬ ದೈವದ ‘ಕೋಲ’ದ ಬಗ್ಗೆ ಸ್ವಲ್ಪ ಮಾಹಿತಿ.

ತುಳುನಾಡಿನಲ್ಲಿ ಉಡುಪಿಯಿಂದ ಆಗ್ನೇಯಕ್ಕೆ ತನ್ನ ಕಾರ್ಯ ಕ್ಷೇತ್ರವನ್ನು ವಿಸ್ತಾರಗೊಳಿಸಿ ಮೆರೆದ ದೈವ ‘ಜಾರಂದಾಯ’ ರಾಜ್ಯದ ಗಡಿಕಾಯುವ ತನ್ನ ಅಧೀನಕ್ಕೊಳಗಾದ ಭಕ್ತರನ್ನು ರಕ್ಷಿಸುವ ಹೊಣೆಗಾರಿಕೆ ಈ ದೈವದ್ದು. ಜುಮಾದಿ, ಪಂಜುರ್ಲಿ, ಪಿಲ್ಚಂಡಿ, ಬಬ್ಬಯ್ಯ, ಕೊಡಮಂದಾಯ, ಕುಕ್ಕಿನಂದಾಯ ಮೊದಲಾದ ದೈವಗಳಿಗೆ ಈ ಪಟ್ಟ ಸೀಮಿತ. ತುಳುನಾಡಿನ ಪೂರ್ವ ಸಂಪ್ರದಾಯದಂತೆ ಮನೆತನದ ‘ಆದಿದೈವ’ನಾಗಿ ನಂಬಿದ ಸಂಸಾರವನ್ನು ಕಾಯುವ ಜವಾಬ್ಧಾರಿ ಜಾರಂದಾಯನಿಗಿದೆ.ದೈವಾರಾಧನೆ ತುಳುವರ ಬದುಕಿನ ಅವಿಭಾಜ್ಯ ಅಂಗ.

‘ಧರ್ಮ ಜಾರಂದಾಯ’.
ಕೈಲಾಸದಲ್ಲಿ ಶಿವನು ಧ್ಯಾನ ಮಾಡುತ್ತಿದ್ದ ಸಂದರ್ಭದಲ್ಲಿ ದಾನವರಿಂದ ತಪಸ್ಸಿಗೆ ಭಂಗವಾಯಿತು, ಆಗ ಕೋಪಗೊಂಡ ಶಿವನು ತನ್ನ ನೀಳವಾದ ಜಡೆಯನ್ನು ಕೊಡುವಿದಾಗ ಉದ್ಭವವಾದವನೇ ವೀರಭದ್ರ. ವೀರಭದ್ರನ ಭಯಾನಕ ರೂಪವನ್ನು ಕಂಡು ರಾಕ್ಷಸರು ಪ್ರಾಣಭಯದಿಂದ ಕಂಡ ಕಂಡಲ್ಲಿಗೆ ಓಡಿದರು. ಶಿವನು ವೀರಭದ್ರನಿಗೆ ಕೋಪವನ್ನು ಬಿಟ್ಟು ಶಾಂತನಾಗಿ ಭೂಲೋಕದಲ್ಲಿ ‘ಧರ್ಮ ಜಾರಂದಾಯ’ ಎಂಬ ಹೆಸರಿನಲ್ಲಿ ಧರ್ಮದಿಂದ ಬದುಕುತ್ತಿರುವ ಭಕ್ತರನ್ನು ಕಾಪಾಡಿಕೊಂಡಿರುವಂತೆ ಅನುಗ್ರಹಿಸಿದರು. ಜಾರಂದಾಯ ದೈವದ ಹುಟ್ಟು ಮತ್ತು ಕಾರ್ಯಕ್ಷೇತ್ರ ಮಂಗಳೂರು ತಾಲ್ಲೂಕಿನಿಂದ ಉತ್ತರಕ್ಕೆ ಮುಲ್ಕಿ,ಕಾಪು,ಕಟಪಾಡಿ ಮತ್ತು ಪೂರ್ವಕ್ಕೆ ಶಿರ್ವ ಮಂಚಕ್ಕಲ್ ವರೆಗೆ.
ಕೋಲ.

ದೈವಾರಧನೆಗೆ ‘ಕೋಲ’ ಕಟ್ಟುವುದು ಎಂಬ ಪದದ ಬಳಕೆಯೂ ಇದೆ. ಕೋಲ,ದೈವಾರಧನೆಯ ಪ್ರದರ್ಶನ. ಕಲಾವಿದರು ಇಲ್ಲಿ ದೈವವನ್ನು ವೇಷಗಾರಿಕೆ ಮೂಲಕ ಆವಾಹಿಸಿಕೊಂಡು ಪ್ರತ್ಯಕ್ಷಗೊಳಿಸುತ್ತಾರೆ. ಒಂದು ನಿರ್ಧಿಷ್ಟ ಸ್ಥಳ, ಕಾಲ, ಸಾಮಾಜಿಕ, ಧಾರ್ಮಿಕ ಪರಿಸರದಲ್ಲಿ ವೇಷಭೂಷಣ ,ಪಾರಂಪರಿಕ ನಂಬಿಕೆ, ಮಡಿ-ಮೈಲಿಗೆ ಮೂಲಕ ಹಂತ ಹಂತವಾಗಿ ಕಾಣದ ಶಕ್ತಿಯನ್ನು ಕಣ್ಣಿಗೆ ಕಾಣಿಸುವಂತೆ ಮಾಡುವುದು. ಅದು ಯಕ್ಷಗಾನದಂತೆ ಪಾತ್ರಧಾರಣೆಯಲ್ಲ, ಬದಲಾಗಿ ಪಾತ್ರೀಕರಣ.ಇತರೆ ಕಲೆಗಳಲ್ಲಿ ಕಲಾವಿದರು ಮತ್ತು ಪಾತ್ರಕ್ಕೆ ನಿರ್ದಿಷ್ಟವಾದ ಅಂತರ ಇದ್ದರೆ ದೈವಾರಾದನೆಯಲ್ಲಿ ಕಲಾವಿದ ಮತ್ತು ಆ ಪಾತ್ರಕ್ಕೆ ವ್ಯತ್ಯಾಸವೇ ಇಲ್ಲ. ಜಾರಂದಾಯ ದೈವದ ಜೊತೆಗೆ ‘ಬಾಯಿಬಾರದ’ ಬಂಟ ಎಂಬ ದೈವ ಶಕ್ತಿಗೂ ಆರಾಧನೆ ನಡೆಯುತ್ತದೆ.

ಜಾರಂದಾಯನಿಗೆ ಪಸರ್ನೆ, ತಂಬಿಲ, ವರ್ಷಾವಧಿ ಕೋಲ ಮೊದಲಾದ ಸೇವೆಗಳು ನಡೆಯುವುದು.ಈ ಸಮಯದಲ್ಲಿ ತೆಂಗಿನಕಾಯಿಯನ್ನು ದೈವ ಆವಾಹನೆಗೆಗಾಗಿ ಮಣೆಮಂಚದಲ್ಲಿರಿಸುವುದು ಸಂಪ್ರದಾಯ.
ಇದು ರಕ್ತಾಹಾರ ಸ್ವೀಕಾರ ಮಾಡುವ ದೈವಶಕ್ತಿ. ಕೋಲದ ಸಂದರ್ಭದಲ್ಲಿ ಪಂಚಕಜ್ಜಾಯ, ದೋಸೆ, ಕಡುಬು, ಶಾವಿಗೆಯನ್ನು ಸಮರ್ಪಿಸಿವರು. ತುಳುನಾಡಿನಲ್ಲಿ ಬಿಲ್ಲವರು, ಬಂಟರು, ಜೈನರು ಜಾರಂದಾಯನ ಆರಾಧಕರು.

 

About Pavanesh D

Pavanesh D

Leave a Reply