Home / All / BRAHMA BALANDI

BRAHMA BALANDI

ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಸಮೀಪದ ಪಡು ಪೆರಾರದಲ್ಲಿ ಬ್ರಹ್ಮ ಬಲಾಂಡಿ ದೈವಸ್ಥಾನ ಬಹಳ ಕಾರಣಿಕದ ಸ್ಥಳವೆಂದು ಪ್ರಸಿದ್ಧವಾಗಿದೆ .ಇಲ್ಲಿ ಸಾವಿರದೊಂದು ಹಾಳೆಯನ್ನು ಉಪಯೋಗಿಸಿ ತಯಾರಿಸಿದ ದೊಡ್ಡ ಅಣಿಯನ್ನು ಧರಿಸುವ ಉಳ್ಳಾಕುಳು ದೈವದ ನೇಮ ತುಂಬಾ ಪ್ರಸಿದ್ಧವಾದುದು ಜೊತೆಗೆ ಇಲ್ಲಿ ಆರಾಧಿಸಲ್ಪಡುವ ಬಹಳ ಕಾರಣಿಕದ ದೈವ ಬಲಾಂಡಿ /ಬಲವಾಂಡಿ ಕೂಡಾ ಅಷ್ಟೆ ಪ್ರಸಿದ್ಧವಾದ ದೈವತ .ಇಂದು(14 ಫೆಬ್ರುವರಿ  2014 ) ರಾತ್ರಿ ಬಲಾಂಡಿ ದೈವದ ಆರಾಧನೆ ಇದೆ.ಈ ದೈವದ ಆರಾಧನೆಯೊಂದಿಗೆ ಮಂಗಳೂರಿನ ಇತಿಹಾಸ ಮತ್ತು ಸಂಘರ್ಷದ  ಕೆಲವು ವಿಚಾರಗಳು ತಳುಕುಹಾಕಿಕೊಂಡಿವೆ

ಈ ದೈವದ ಪಾಡ್ದನದ ಕಥಾನಕ ಹೀಗಿದೆ
ಮಂಗಳೂರಿನ ಚಂದ್ರಶೇಖರ (ಮಂಗಾರದ )ಅರಸ ಆಳುತ್ತಿದ್ದ ಕಾಲದಲ್ಲಿ ಗುರುಪುರದ ದೋಣೆಂಜೆ ಗುತ್ತಿನಲ್ಲಿ ಸತ್ಯ ಬನ್ನಾರ್ ಮತ್ತು ಲಕ್ಷ್ಮಿ ಎಂಬ ದಂಪತಿಗಳಿದ್ದರು. ಅವರಿಗೆ ದೀರ್ಘಕಾಲ ಸಂತಾನವಿಲ್ಲದ ಕಾರಣ ಅವರು ಬೆರ್ಮರಿಗೆ ಹರಕೆ ಹೇಳುತ್ತಾರೆ. ಬ್ರಹ್ಮರು ತನ್ನ ಗಣಗಳಲ್ಲಿ ಒಬ್ಬನನ್ನು ಈ ದಂಪತಿಗಳಿಗೆ ಮಗನಾಗಿ ಸಿಗುವಂತೆ ಹೇಳುತ್ತಾರೆ. ನದೀ ತೀರದ ಮರಳ ದಂಡೆಯಲ್ಲಿ ಸಿಕ್ಕ ಮಗುವನ್ನು ದಂಪತಿಗಳು ಸಂತೋಷದಿಂದ ಸಾಕುತ್ತಾರೆ. ಹುಡುಕಿಕೊಂಡು ಹೋಗುವಾಗ ಸಿಕ್ಕಿದ ಮಗು ‘ನಾಡು’ ಎಂದು ಹೆಸರಿಟ್ಟು ಸಾಕುತ್ತಾರೆ. ನಾಡು ಬಹಳ ವೀರನಾಗಿರುತ್ತಾನೆ. ಸತ್ಯ ಬನ್ನಾರ್ ಚಂದ್ರಶೇಖರ ಅರಸರ ಮಂತ್ರಿಯಾಗಿ ಸತ್ಯನಿಷ್ಠೆಯಿಂದ ಹೆಸರಾಗಿರುತ್ತಾರೆ. ಇದನ್ನು ಸಹಿಸದ ಅಲ್ಲಿಯ ದಳವಾಯಿ ಅವರನ್ನು ಮೋಸದಿಂದ ಕೊಲ್ಲುತ್ತಾನೆ. ಪತಿಯನ್ನು ಕಳೆದುಕೊಂಡ ಲಕ್ಷ್ಮಿ ಬನ್ನಾರ್ ದುಃಖದಿಂದ ಪ್ರಾಣತ್ಯಾಗ ಮಾಡುತ್ತಾಳೆ. ಈ ಕಾರಣದಿಂದಾಗಿ ನಾಡುವಿಗೆ ದೇವರ ಮೇಲೆ ಭಕ್ತಿ-ನಿಷ್ಠೆ ಮಾಯವಾಗಿ ಜುಗುಪ್ಸೆ ಇರುತ್ತದೆ.

ಮಂಗಾರದÀ ಅರಸರು ಹುಟ್ಟುವುದಕ್ಕೆ ಮೊದಲು ಅವರ ಮಾವ ಸಂತತಿಯ ಸಲುವಾಗಿ ವೇಣೂರಿನ ಮಹಾದೇವ ಮಹಾಲಿಂಗೇಶ್ವರ ದೇವರಿಗೆ ಹರಿಕೆ ಹೇಳಿಕೊಂಡಿದ್ದರು. ಅವರು ಅಲ್ಲಿಗೆ ಹೋಗಲು ನಾಡುವಿನ ಸಹಾಯ ಕೇಳುತ್ತಾರೆ. ಆಗ ನಾಡು ‘ನಾನು ನಿಮ್ಮಜೊತೆಯಲ್ಲಿ ಬಂದು ದಾರಿ ತೋರಿಸುತ್ತೇನೆ. ಆದರೆ ನಿಮಗೆ ಕಂಡ ಕಂಡ ದೇವರಿಗೆ ಹೂ ಹಾಕಬೇಕು, ಕೈ ಮುಗಿಯಬೇಕು. ಆದರೆ ನಾನು ಹಾಗೆ ಮಾಡುವುದಿಲ್ಲ. ನನ್ನನ್ನು ಕೈಮುಗಿಯುವಂತೆ ಹೇಳಬಾರದು ಎಂದು ಷರತ್ತು ವಿಧಿಸುತ್ತಾನೆ. ಅನಂತರ ನನಗೆ ಪ್ರಯಾಣಕ್ಕೆ ಬಿಳಿಕುದುರೆ ಬಿಳಿಸತ್ತಿಗೆ ಬೇಕು ಎಂದು ಹೋಗುವಾಗ ನಾನು ಮುಂದೆ ನೀವು ಹಿಂದೆ ಬರಬೇಕು. ಬರುವಾಗ ನೀವು ಮುಂದೆ ನಾನು ಹಿಂದೆ ಬರುವೆನೆಂದು ಹೇಳುತ್ತಾನೆ.

ಅರಸ ಮುತ್ತುತಾವರೆಯ ಆಳು ಪಲ್ಲಕ್ಕಿಯಲ್ಲಿ ಪ್ರಯಾಣ ಹೊರಡುತ್ತಾನೆ. ದಾರಿಯಲ್ಲಿ ಕದ್ರಿ ಮಂಜುನಾಥ ದೇವಾಲಯ ಸಿಕ್ಕಾಗ ಅರಸರು “ಮಂಜುನಾಥ ದೇವರೆಂದರೆ ತುಂಬಾ ಕಾರಣಿಕದ ದೇವರು. ನಾಡು ನೀನು ಕುದುರೆಯಿಂದಿಳಿದು ಬಾ ದೇವರಿಗೆ ನಮಸ್ಕಾರ ಮಾಡಿಬರೋಣ” ಎಂದಾಗ “ಜೋಗಿ ದೇವರಿಗೆ ನಾನು ಕೈಮುಗಿಯುವುದಿಲ್ಲ. ನೀವು ಹೋಗಿ ಬನ್ನಿ” ಎನ್ನುತ್ತಾನೆ. ಅರಸರು ಹೋಗಿ ಕೈಮುಗಿದು ಬರುತ್ತಾರೆ. ಮುಂದೆ ಕುಡುಪು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇದು ಪುನರಾವರ್ತನೆಯಾಗುತ್ತದೆ. ಮುಂದೆ ತೋಡಾರು, ಮೂಡಬಿದ್ರೆ ನಾಡಬೈಲ ಬಾಕಿಮಾರಿಗೆ ಬರುತ್ತಾರೆ. ಅಲ್ಲಿ ನಾಡಬೈಲ ಬ್ರಹ್ಮರ ದೇವಸ್ಥಾನವಿದೆ. ಅಲ್ಲಿಗೆ ಬಂದಾಗ ಅರಸರು “ನಾಡು, ನಾಡ ಬೈಲ ಅರಸರೆಂದರೆ11 ಬಹು ದೊಡ್ಡ ಕಾರಣಿಕದ ದೈವ, ಕುದುರೆಯಿಂದಿಳಿದು ಹರಕೆ ಹಾಕು” ಎಂದು ಹೇಳುತ್ತಾರೆ.

ಆಗ “ಈ ಬ್ರಹ್ಮರ ಗುಂಡದ ಮಾಡಿನ ಈ ಕಡೆಯಿಂದ ನುಗ್ಗಿದ ಕಾಗೆ ಆ ಕಡೆಯಿಂದ ಹೊರಬರುತ್ತದೆ. ಒದ್ದೆ ಬಟ್ಟೆಯಲ್ಲಿ, ಹಿಡಿಕೂಳಿನಲ್ಲಿ ಪೂಜೆ ಮಾಡುವ ಬ್ರಾಹ್ಮಣನ ಪೂಜೆಯನ್ನು ಪಡೆಯುವ ಬ್ರಹ್ಮರಿಗೆ ನಾನು ಕೈಮುಗಿಯುವುದಿಲ್ಲ, ಹರಕೆ ಸಲ್ಲಿಸುವುದಿಲ್ಲ” ಎಂದು ಹೇಳುತ್ತಾನೆ. ಅರಸರು ಪಲ್ಲಕ್ಕಿಯಿಂದಿಳಿದು ನಾಡಬೈಲ ಬ್ರಹ್ಮದೇಗುಲಕ್ಕೆ ಬಂದು ಕೈಮುಗಿದು ಹರಕೆ ಒಪ್ಪಿಸುತ್ತಾರೆ. ಅಷ್ಟರಲ್ಲಿ ಬ್ರಹ್ಮರು ಒಬ್ಬ ಬಡ ಬ್ರಾಹ್ಮಣನ ರೂಪದಲ್ಲಿ ನಾಡುವಿನ ಬಳಿಗೆ ಒಂದು ‘ನೀನು ಈಗ ಹೋಗು, ಹಿಂದಿರುಗುವಾಗ ಈ ದಾರಿಯಲ್ಲಿ ಬರುವಿಯಷ್ಟೆ?” ಎಂದು ಕೇಳುತ್ತಾರೆ. ನಾಡು ನಕ್ಕು “ಈಗ ಹೋಗುತ್ತೇನೆ ಮತ್ತೆ ಬರುತ್ತೇನೆ” ಎಂದು ಹೇಳುತ್ತಾನೆ.

ಮುಂದೆ ವೇಣೂರಿನ ಮಹಾದೇವ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋದರು. ಅಲ್ಲಿ ಜಾತ್ರೆ ನಡೆಯುತ್ತಿತ್ತು. ಅರಸರು ಭಕ್ತಿಯಿಂದ ಮೂರು ಸುತ್ತು ಬಂದು ಹರಕೆ ವಸ್ತುಗಳನ್ನು ಭಕ್ತಿಯಿಂದ ಅರ್ಪಿಸಿದ ನಂತರ ಹಿಂದಕ್ಕೆ ಪ್ರಯಣ ಆರಂಭಿಸುತ್ತಾರೆ. ಆಗ ಅರಸರು ಮುಂದೆ, ನಾಡು ಹಿಂದಿನಿಂದ ಹೋಗುತ್ತಾರೆ. ವೇಣೂರು, ಏಣೆಕಲ್ಲು ದಾಟಿ ನಾಡಬೈಲ ಬಾಕಿಮಾರಿಗೆ ಮುಟ್ಟಿದಾಗ ನಾಡ ಬೈಲ ಬ್ರಹ್ಮರು ಬ್ರಾಹ್ಮಣನ ರೂಪದಲ್ಲಿ ಮತ್ತೆ ಕಾಣಿಸಿಕೊಂಡು ನಾಡುವಿನ ಕುದುರೆಯ ಕಡಿವಾಣ ಹಿಡಿದರು. ಆಗ ನಾಡು ಕೋಪಗೊಂಡು, ‘ನನ್ನ ಕುದುರೆಯ ಕಡಿವಾಣ ಬಿಟ್ಟು ಬಿಡಿ ಭಟ್ಟರೆ, ಅದು ಮರುಳು ಕುದುರೆ ಕಚ್ಚಲೂ, ಒದೆಯಲೂ ಹೇಸದು’ ಎಂದು ಹೇಳುತ್ತಾನೆ. ‘ಕಚ್ಚಿದರೆ ಕಚ್ಚಲಿ, ಒದೆದರೆ ಒದೆಯಲಿ’ ಎಂದವರು ಹೇಳಿದಾಗ ನಾಡು ಚಾಟಿಯಿಂದ ಕುದುರೆಯನ್ನು ಕೆರಳಿಸುತ್ತಾನೆ.

ಬ್ರಾಹ್ಮಣನಿಗೂ ನಾಡುವಿಗೂ ದೊಡ್ಡ ಹೊಡೆದಾಟವಾಗಿ ತಾಳೆಮರದಷ್ಟು ಎತ್ತರಕ್ಕೆ, ಸತ್ತಿಗೆಯಷ್ಟು ಅಗಲಕ್ಕೆ ಧೂಳು ಹಾರಿತು. ಇದ್ದಕ್ಕಿದ್ದಂತೆ ಬ್ರಹ್ಮರು ನಾಡುವನ್ನು ಮಾಯಕ ಮಾಡಿ, ಕುದುರೆಯನ್ನು ಕಲ್ಲು ಮಾಡಿದರು. ಮುಂದೆ ಹೋದ ಅರಸರು ಹಿಂತಿರುಗಿ ನೋಡಿದಾಗ ನಾಡು ಮತ್ತು ಅವನ ಕುದುರೆ ಕಾಣಿಸಲಿಲ್ಲ. ಆಗ ಅವರು ಬಂದು ಬ್ರಹ್ಮರಲ್ಲಿ ಪ್ರಾರ್ಥಿಸಿದಾಗ ಬ್ರಹ್ಮರು ಪ್ರಸನ್ನರಾಗಿ, ಅವನನ್ನು ಬಲವಂಡಿ ಎಂಬ ದೈವದ ಹೆಸರಿನಲ್ಲಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತಾರೆ. ಪಡುಪೆರಾರದಲ್ಲಿ ಬ್ರಹ್ಮರ ಜೊತೆ ಆರಾಧನೆ ಪಡೆಯುವಂತೆ ಮಾಡುತ್ತಾರೆ. ಈಗ ಪಡುಪೆರಾರದಲ್ಲಿ ಬ್ರಹ್ಮ-ಬಲವಂಡಿ ದೇವಸ್ಥಾನವಿದೆ. ಈ ದೇವಳಕ್ಕೆ ಸ್ವಲ್ಪ ದೂರದಲ್ಲಿ ಬಲವಂಡಿ ಉದ್ಭವವಾದ ಸ್ಥಳ ಎಂಬಲ್ಲಿ ಒಂದು ಕಂಬವಿದೆ. ಅದನ್ನು ಬಂಟಕಂಬ ಎನ್ನುತ್ತಾರೆ.

ಇಲ್ಲಿ ಉಲ್ಲೇಖವಾಗುವ ಮಂಗಳೂರಿನ ಅರಸ ಯಾರು ?ನಾಡು ಅನ್ನುವ ಹೆಸರೇ ಸ್ವಲ್ಪ ವಿಶಿಷ್ಟವಾಗಿದೆ.ಆತನ ತಂದೆಯನ್ನು ಮೋಸದಿಂದ ಕೊಲ್ಲಿಸಿದ ದಳವಾಯಿ ಯಾರು ?ಯಾಕೆ ಇತ್ಯಾದಿಗಳು ಇತಿಹಾಸದ ದೃಷ್ಟಿಯಿಂದ ಅಧ್ಯಯನವಾಗಬೇಕಾದ ವಿಚಾರಗಳಾಗಿವೆ.

ಜೊತೆಗೆ ಇಲ್ಲಿ ಸಂಘರ್ಷದ ಚಿತ್ರಣವಿದೆ. ಹೋಗುವಾಗಲೆ ನೀನು ಇದೇ ದಾರಿಯಲ್ಲಿ ಬರುವಿ ತಾನೇ ಎಂದು ಕೇಳಿರುವಲ್ಲಿ ಹೋಗದಂತೆ ತಡೆಯುವ/ದುರಂತದ ಸೂಚನೆ ಇದೆ..ಬ್ರಾಹ್ಮಣನೊಬ್ಬ ಬಲಾಂಡಿಯನ್ನು/ನಾಡುವನ್ನು ಕುದುರೆ ಹಿಡಿದು ನಿಲ್ಲಿಸಿದಾಗ ತಾಳೆ  ಮರದಷ್ಟು ಎತ್ತರಕ್ಕೆ ಧೂಳು ಹಾರಿತು ಎಂಬಲ್ಲಿ ಯುದ್ಧದ ಸೂಚನೆ ಇದೆ.ಕೇವಲ ಒಬ್ಬ ಬ್ರಾಹ್ಮಣನಿಗೆ ಕುದುರೆ ಏರಿರುವ ವೀರನಾದ ನಾಡುವನ್ನು ಹಿಡಿದೆಳೆಯಲು ಅಸಾಧ್ಯ .

ಅದಲ್ಲದೆ  ಮಂಗಳೂರಿನ ಅರಸ ಮುಂದೆ ಹೋಗಿದ್ದಾನೆ. ಅವನಿಗೆ ಗೊತ್ತಿಲ್ಲದಂತೆ ಇಂಥ ಘೋರ ಹೋರಾಟ ನಡೆಯಿತು ಎನ್ನುವುದು ಇಲ್ಲಿ ಸಂದೇಹಕ್ಕೆ ಎಡೆ ಮಾಡಿ ಕೊಡುತ್ತದೆ.ಆತನನ್ನು ಊರಿನಿಂದ ದೂರಕ್ಕೆ ಬರುವಂತೆ ಮಾಡಿ ಉಪಾಯದಿಂದ /ಮೋಸದಿಂದ ದುರಂತಕ್ಕೀಡು ಮಾಡಿರುವ ಸಾಧ್ಯತೆ ಇದೆ. ಆತನ ತಂದೆಯನ್ನು ಮೋಸದಿಂದ ಕೊಂದವರೇ,” ಬಲಿಷ್ಟನೂ ವೀರನೂ ಆಗಿರುವ ಇವನು ಮುಂದೆ ಪ್ರತೀಕಾರ ಮಾಡಿದರೆ” ಎಂಬ ಭಯದಿಂದ ಇವನನ್ನು ಮೋಸದಿಂದ ಕೊಂದಿರುವ ಸಾಧ್ಯತೆ ಇದೆ.

ಮಾಯ ಮಾಡಿದರು ಎಂಬಲ್ಲಿ ಆತನ ದುರಂತ ಮರಣದ ಸೂಚನೆ ಇದೆ.ಅರಸು ದೌರ್ಜನ್ಯ ಮತ್ತು ವರ್ಗ ಸಂಘರ್ಷದ ದುರಂತ ಕಥಾನಕಗಳನ್ನು ಉಳ್ಲಾಕುಳು.ಜುಮಾದಿ ಬೆರ್ಮೆರ್ ಮೊದಲಾದ ದೈವಗಳು ಮಾಯ ಮಾಡಿದ್ದು ಎಂದು ಹೇಳುವ ಅನೇಕ ಕಥಾನಕಗಳು ಸಿಗುತ್ತವೆ. ಹೀಗೆ ಇಲ್ಲಿ ಕೂಡಾ ನಾಡುವನ್ನು ಬೆರ್ಮೆರ್ ಮಾಯ ಮಾಡಿದರು ಎಂಬ ಕಥಾನಕ ಹುಟ್ಟಿಕೊಂಡಿರಬಹುದು .

ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯಲ್ಲಿ ಅಲ್ಲಲ್ಲಿ ಕಾಣ ಬರುವ ವಿದ್ಯಮಾನವೇ ಆಗಿದೆ.ಅಂತೆಯೇ ನಾಡುವಿಗೆ  ಮರಣಾನಂತರ ಆತನಿಗೆ ದೈವತ್ವ ಪ್ರಾಪ್ತಿ ಆಗಿರಬೇಕು.ತನ್ನ ಬಲದ ಕಾರಣಕ್ಕೆ ಆತ ಬಲಾಂಡಿ /ಬಲವಾಂಡಿ ಎಂಬ ಹೆಸರಿನಲ್ಲಿ ಆರಾಧಿಸಲ್ಪಡುತ್ತಿರುವ ಸಾಧ್ಯತೆ ಇದೆ.

ಈ ಬಗ್ಗೆ ಸಮಗ್ರ ಅಧ್ಯಯನ ನಡೆದರೆ ಹೆಚ್ಚಿನ ಮಾಹಿತಿ ಸಿಗಬಹುದು

ಡಾ.ಲಕ್ಷ್ಮೀ ಜಿ ಪ್ರಸಾದ

ಕನ್ನಡ ಉಪನ್ಯಾಸಕಿ

ಸರ್ಕಾರಿ ಪದವಿ ಪೂರ್ವ ಕಾಲೇಜು

 ಬೆಳ್ಳಾರೆ,ಸುಳ್ಯ ತಾ ,ದ ಕ ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಸಮೀಪದ ಪಡು ಪೆರಾರದಲ್ಲಿ ಬ್ರಹ್ಮ ಬಲಾಂಡಿ ದೈವಸ್ಥಾನ ಬಹಳ ಕಾರಣಿಕದ ಸ್ಥಳವೆಂದು ಪ್ರಸಿದ್ಧವಾಗಿದೆ .ಇಲ್ಲಿ ಸಾವಿರದೊಂದು ಹಾಳೆಯನ್ನು ಉಪಯೋಗಿಸಿ ತಯಾರಿಸಿದ ದೊಡ್ಡ ಅಣಿಯನ್ನು ಧರಿಸುವ ಉಳ್ಳಾಕುಳು ದೈವದ ನೇಮ ತುಂಬಾ ಪ್ರಸಿದ್ಧವಾದುದು ಜೊತೆಗೆ ಇಲ್ಲಿ ಆರಾಧಿಸಲ್ಪಡುವ ಬಹಳ ಕಾರಣಿಕದ ದೈವ ಬಲಾಂಡಿ /ಬಲವಾಂಡಿ ಕೂಡಾ ಅಷ್ಟೆ ಪ್ರಸಿದ್ಧವಾದ ದೈವತ .ಇಂದು(14 ಫೆಬ್ರುವರಿ  2014 ) ರಾತ್ರಿ ಬಲಾಂಡಿ ದೈವದ ಆರಾಧನೆ ಇದೆ.ಈ ದೈವದ ಆರಾಧನೆಯೊಂದಿಗೆ ಮಂಗಳೂರಿನ ಇತಿಹಾಸ ಮತ್ತು ಸಂಘರ್ಷದ  ಕೆಲವು …

Review Overview

User Rating: 4.9 ( 1 votes)
0

About Pavanesh D

Pavanesh D

Leave a Reply