Home / All / Aati Kalanja, ಆಟಿಕಳಂಜ :

Aati Kalanja, ಆಟಿಕಳಂಜ :

Aati Kalanja, ಆಟಿಕಳಂಜ :

ಸುರಿಯುವ ಮಳೆಯ ಆಟಿ(ಆಷಾಢ) ತಿಂಗಳೆಂದರೆ ತುಳುನಾಡ ಜನತೆ ಮನೆಯಿಂದ ಹೊರಬರಲೂ ಆಗದಂತಹ ಕಾಲ ಎಂಬುದು ವಾಡಿಕೆ. ಈ ಮಾಸದಲ್ಲಿ ಆಟಿ ಕಳಂಜ ಕುಣಿತ ತುಳುನಾಡಿನ ವಿಶೇಷ.

ಆಟಿ ತಿಂಗಳಿನಲ್ಲಿ ಕೂಡಿಟ್ಟ ಧವಸಧಾನ್ಯಗಳು ಮುಗಿಯುವ ಕಾರಣ, ಲಭ್ಯ ಸಸ್ಯಮೂಲವೇ ಆಹಾರವಾಗುತ್ತದೆ. ಇದೇ ಸಂದರ್ಭದಲ್ಲಿ ಕಾಲಿಡುವ ಶೀತ, ಕೆಮ್ಮು ಹಾಗೂ ಜ್ವರಬಾಧೆ, ಸೊಳ್ಳೆಕಾಟ ಜನತೆಯನ್ನು ಕಂಗೆಡಿಸುತ್ತವೆ. ಇದನ್ನೆಲ್ಲಾ ನಿವಾರಿಸಲು ಆಟಿ ಕಳಂಜ ಬರುತ್ತಾನೆ ಎಂಬ ನಂಬಿಕೆ ಇದೆ.ಆಟಿಕಳಂಜ ಹೆಸರೇ ಸೂಚಿಸುವಂತೆ ಆಟಿ ತಿಂಗಳಿನಲ್ಲಿ ನಡೆಯುವ ಹಾಡು-ಕುಣಿತ ಪ್ರಧಾನವಾದ ಜನಪದ ಕಲೆ.

ಕಳಂಜನ ವೇಷಭೂಷಣ ಮಾಂತ್ರಿಕಭೂತದ ನೆನಪನ್ನು ತರುವಂತಿರುತ್ತದೆ. ಈ ಆಟಿ ಕಳಂಜವನ್ನು ನಲಿಕೆ ಜನಾಂಗದವರು ಕಟ್ಟುತ್ತಾರೆ. ಕಾಲಿಗೆ ಗಗ್ಗರ , ಸೊಂಟಕ್ಕೆ ಕೆಂಪುಬಿಳಿ ಪಟ್ಟಿಯನ್ನು ಹೊಂದಿರುವ ಇಜಾರವನ್ನೂ, ಅದರ ಮೇಲೆ ತೆಂಗಿನ ತಿರಿಯಿಂದಮಾಡಿದ ಜಾಲರಿಯನ್ನೂ, ತಲೆಗೆ ಅಡಿಕೆ ಹಾಳೆಯ ಶಿರಸ್ತಾÅಣವನ್ನೂ ಧರಿಸಿರುತ್ತಾನೆ. ತೋಳಿಗೆ ಕೇಪಳಹೂವಿನ ದಂಡೆಯನ್ನೂ, ಮುಖಕ್ಕೆ ಕೆಂಪುಬಿಳಿಬಣ್ಣವನ್ನೂ,ಕೆಂಚಿ ಗಡ್ಡಮೀಸೆಯನ್ನೂ ಹೊಂದಿರುತ್ತಾನೆ ಆಟಿಕಳಂಜ. ಪನೆ ಮರದ ಗರಿಯಿಂದ ಮಾಡಿದ ಕೊಡೆಯಾಕಾರದ ಛತ್ರಿಯನ್ನು ಹಿಡಿದಿರುತ್ತಾನೆ.

ಕಳಂಜ ಎಂದರೆ ಕಳೆವ ವ್ಯಕ್ತಿ ಎಂದರ್ಥ. ಮನೆಮನೆಗೆ ಬಂದು ರೋಗರುಜಿನಗಳ ಮಾರಿಯನ್ನು ಓಡಿಸುವುದು ಈತನ ಕೆಲಸ. ಮನೆಯಂಗಳದಲ್ಲಿ ಕುಣಿದು ಮನೆಯೊಡತಿ ನೀಡುವ ಹುಣಸೆ, ತೆಂಗಿನಕಾಯಿ, ಬಟ್ಟೆ, ತೆಂಗಿನ ಎಣ್ಣೆ, ತೋಟದ ಫಲವಸ್ತುಗಳನ್ನು ಪಡೆದು ಮನಗೆ ಬಂದ ಮಾರಿಯನ್ನು ಕಳಂಜ ಕಳೆಯುತ್ತಾನೆ ಎಂಬ ಬಲವಾದ ನಂಬಿಕೆ ಇದೆ.

ಆಟಿ ಕಳಂಜಕ್ಕೆ ಕಿನ್ನಿ ಎಂಬ ವೇಷವೂ ಸಾಥ್ ನೀಡುತ್ತದೆ. ಊರಿನಲ್ಲಿ ಭೂತನರ್ತನ ಮಾಡುವ ಕಲಾವಿದರು ಈ ವೇಷ ಹಾಕುತ್ತಾರೆ. ಇವರು ತೆಂಗಿನ ಸಿರಿ, ಸುಣ್ಣ, ಬಣ್ಣಗಳಿಂದ ಅಲಂಕೃತಗೊಂಡ ಬಳಿಕ ಊರಿನ ಮನೆಗಳಿಗೆ ತೆರಳುತ್ತಾರೆ. ತೆಂಬರೆ ಎಂಬ ವಾದ್ಯದಮೇಳದೊಂದಿಗೆ ಆಟಿಕಳಂಜ ನರ್ತನ ಮಾಡಿ ಮರಳಿದ ಬಳಿಕ ಮನೆ, ಕೃಷಿಗೆ ತಟ್ಟಿದ ರೋಗಗಳು ಹೋಗುತ್ತವೆ ಎಂದು ಪ್ರತೀತಿ.
ವಿಶೇಷವಾಗಿ ಸತ್ತವರ ಮಾಸವೆಂದೆ ಉಲ್ಲೇಖೀಸಲ್ಪಡುವ ಈ ತಿಂಗಳಲ್ಲಿ ಸತ್ತವರಿಗೆ ಬಳಸುವುದು ಮತ್ತು ಪ್ರೇತಾತ್ಮ ಮದುವೆ ಮಾಡಿಸುತ್ತಾರೆ. ಅವಿವಾಹಿತ ಗಂಡು-ಹೆಣ್ಣುಗಳು ರೋಗ ರುಜಿನಕ್ಕೆ ಅಥವಾ ದುರ್ಮರಣಕ್ಕೆ ಬಲಿಯಾದರೆ ಮುಂದೆ ಅವರ ಪ್ರೇತಾತ್ಮಗಳಿಗೆ ಮದುವೆ ನಡೆಸಿ ಮೋಕ್ಷ ಪ್ರಾಪ್ತಿಸುವ ಕ್ರಮವೇ ಪ್ರೇತಾತ್ಮ ಮದುವೆ. ಗತಿಸಿದ ಪ್ರೇತಾತ್ಮಗಳು ಈ ಮಾಸದಲ್ಲಿ ಭೂಲೋಕ ಸಂಚಾರ ಮಾಡುತ್ತವೆ ಆದ್ದರಿಂದ ರಾತ್ರಿ ಸಂಚಾರ ಮಾಡಬಾರದೆಂಬ ನಂಬಿಕೆಯೂ ಇದೆ.

ಮಳೆಗಾಲದಲ್ಲಿ ಆರ್ಥಿಕ ಕೊರತೆ ಹೆಚ್ಚಾಗಿ ಬಾಧಿಸುವುದು ಆಷಾಢ ಮಾಸದಲ್ಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾಯಕವಿಲ್ಲದ ಈ ತಿಂಗಳಲ್ಲಿ ಎಲ್ಲದಕ್ಕೂ ಬರಗಾಲ ತೀವ್ರವಾಗಿ ಕಾಡುತ್ತಿರುತ್ತದೆ. ಇದೇ ಪರಿಕಲ್ಪನೆಯ ಕಾರಣದಿಂದ ನವ ವಿವಾಹಿತೆಯಾದ ಹೆಣ್ಣು ಮಗಳು ಆಷಾಢ ಕಳೆಯಲು ತವರು ಮನೆಗೆ ಹೋಗುವ ಸಂಪ್ರದಾಯ ವಾಡಿಕೆಯಲ್ಲಿದೆ.

ಬೇಸಗೆ ಹಾಗೂ ಮಳೆಯ ಸ್ಥಿತ್ಯಂತರ ಕಾಲವಾದ್ದರಿಂದ ಈ ಬದಲಾದ ವಾತಾವರಣದೊಂದಿಗೆ ಬರುವ ಮಹಾ ಮಾರಿಯಂತಿರುವ ರೋಗರುಜಿನಗಳ ಉಪಶಮನಕ್ಕೆ ಆಚರಿಸುವ ಎರಡು ರೀತಿಯ ಸಂಪ್ರದಾಯವನ್ನು ಈ ಮಾಸದಲ್ಲಿ ಕಾಣಬಹುದು. ವೈದ್ಯಕೀಯ ಇರಾದೆಗೆ ಹೊಂದಿಕೊಂಡು ಆಟಿ ಅಮಾವಾಸ್ಯೆಯಂದು ಹಾಲೆ ಮರದ ಕೆತ್ತೆ ರಸ ಸೇವನೆ ಒಂದಾದರೆ, ತುಳುನಾಡಿನ ಧಾರ್ಮಿಕ ಹಿನ್ನೆಲೆಗೆ ಹೊಂದಿಕೊಂಡ ಭೂತರಾಧನೆಯ ಆಟಿಕಳಂಜ ಇನ್ನೊಂದಾಗಿದೆ. ಆಟಿ ಅಮಾವಾಸ್ಯೆಯಂದು ಬೆಳಂಬೆಳಗ್ಗೆ ಹಾಲೆ ಮರದ ಕೆತ್ತೆ ತಂದು ಅದನ್ನು ಗುದ್ದಿ ರಸ ತೆಗೆದು ಅದರೊಂದಿಗೆ ಬೆಳ್ಳುಳ್ಳಿ, ಕರಿಮೆಣಸು ಗುದ್ದಿ ಹಾಕಿ ಬರಿ ಹೊಟ್ಟೆಗೆ ಕುಡಿಯುತ್ತಾರೆ. ಬಳಿಕ ಮೆಂತ್ಯೆಯ ಗಂಜಿ ಊಟ ಮಾಡುತ್ತಾರೆ. ಉಷ್ಣ ಕಳೆಯಲು ಇದು ಒಳ್ಳೆಯದು. ಇದರಿಂದಾಗಿ ಇಡೀ ವರ್ಷ ಯಾವುದೇ ರೋಗರುಜಿನಗಳು ಶರೀರಕ್ಕೆ ತಟ್ಟುವುದಿಲ್ಲ ಎಂಬುವುದು ಗ್ರಾಮೀಣರ ನಂಬಿಕೆ.

ತುಳುನಾಡಿನ ದೈವಸ್ಥಾನದಲ್ಲಿ ಈ ತಿಂಗಳ ಸಂಕ್ರಮಣಕ್ಕೆ ತಂಬಿಲ ಕೊಟ್ಟು ಬಾಗಿಲು ಹಾಕಿದರೆ ಮತ್ತೆ ತೆರೆಯುವುದು ಬರುವ ಸಿಂಹ ಸಂಕ್ರಮಣಕ್ಕೆ. ಈ ನಡುವೆ ಯಾವುದೇ ಕಾರ್ಯಕ್ಕೂ ದೈವಸ್ಥಾನದ ಬಾಗಿಲು ತೆರೆಯುವಂತಿಲ್ಲ. ಈ ಸಂದರ್ಭದಲ್ಲಿ ದೈವಗಳು ಘಟ್ಟವೇರುತ್ತದೆ ಎಂಬ ನಂಬಿಕೆ ಇಲ್ಲಿನವರದ್ದು. ದುರಿತಗಳನ್ನು ದೂರವಿರಿಸಲು ನಮ್ಮ ಪೂರ್ವಜರು ಆಚರಿಸುತ್ತಿದ್ದ ಸದ್ಗುಣೋಪಸನೆಗಳಲ್ಲಿ ರಾಮಾಯಣ ಪಾರಾಯಣವೂ ಒಂದಾಗಿದೆ. ದೇವಸ್ಥಾನ ಗಳಲ್ಲಿ, ತರವಾಡು ಮನೆಗಳಲ್ಲಿ ಹಿಗೇ ಪ್ರತಿಯೊಂದು ಮನೆಗಳಲ್ಲೂ ಇದು ಪ್ರಚಲಿತದಲ್ಲಿರುವುದು ಕಂಡುಬರುತ್ತದೆ.

ಹೊರಾಂಗಣ ಆಟಗಳಿಗೆ ಮಳೆಯಿಂದಾಗಿ ಕಡಿವಾಣ ಉಂಟಾದ ಈ ಮಾಸದಲ್ಲಿ ಚೆನ್ನೆಮಣೆ, ಅಪ್ಪಂಗಾಯಿಯಂತಹ ಆಟಗಳು ಪ್ರಮುಖ ಮನೋರಂಜನೆಯ ಕ್ರೀಡೆಗಳಾಗಿವೆ.ಆದರೆ ಗಂಡ-ಹೆಂಡತಿ, ಅಣ್ಣ-ತಂಗಿಯೊಂದಿಗೆ ಈಮಾಸದಲ್ಲಿ ಚೆನ್ನೆಮಣೆ ಆಟವಾಡಬಾರದೆಂಬ ಕಟ್ಟಳೆಯೂ ಇದೆ. ಉಳಿದಂತೆ ಚೆನ್ನುಕುಣಿತ, ದುಡಿಕುಣಿತ, ರಾಧಾಕೃಷ್ಣ ತಿರುಗಾಟ ಈ ಮಾಸದ ಪ್ರಮುಖ ಮನರಂಜನೆಗಳಾಗಿಯೂ ಭಕ್ಷಬೋಜ್ಯಗಳಾಗಿ ಕಣಿಲೆ, ಕೆಸು, ತಗತ್ತೆ ಇವುಗಳ ಪತ್ರೋಡೆ ಗಸಿ, ಉಪ್ಪು ನೀರಿನಲ್ಲಿ ಹಾಕಿಟ್ಟ ಸೊಳೆ, ಮಾವಿನಕಾಯಿ, ಬೇಯಿಸಿ ಒಣಗಿಸಿಟ್ಟ ಹಲಸಿನ ಬೀಜ, ಗೆಣಸಿನ ಹಪ್ಪಳ, ಸಂಡಿಗೆ, ಗದ್ದೆ ಬದಿಗಳಲ್ಲಿ ಸಿಗುವ ಬ್ರಾಹ್ಮಿ ಎಲೆಯ ಖಾದ್ಯಗಳು ರುಚಿಯಾದ ಸವಿಯನ್ನುಂಟು ಮಾಡುತ್ತವೆ.

ತುಳುನಾಡಿನ ಈ ನಂಬಿಕೆಗಳು ಆಷಾಢದ ಬಗ್ಗೆ ಕೀಳರಿಮೆ ಮೂಡಿಸಿದರೂ ಹಲವು ವೈಶಿಷ್ಟದಿಂದ ತನ್ನದೆ ಆದ ರೀತಿಯಲ್ಲಿ ಬೆಳೆದು ಅತ್ತ ಅಳಿಯಲೂ ಬಾರದ, ಈತ್ತ ಉಳಿಯಲೂ ಬಾರದ ಡೋಲಾಯಮಾನದ ಪರಿಸ್ಥಿತಿಯನ್ನು ಹೊಂದಿದೆ. ಇಂದಿನ ತಂತ್ರಜ್ಞಾನದ ಯುಗದಲ್ಲೂ ಜಾನಪದದೊಂದಿಗೆ ತನ್ನ ಇರುವಿಕೆಯನ್ನು ಕಾಯ್ದುಕೊಂಡಿದೆ.

ಆಷಾಢ ಕಾಲದಲ್ಲಿ ಸಮಾಧಾನ, ಧೈರ್ಯ ಹಾಗೂ ಮನೋರಂಜನೆ ನೀಡುವ ಒಬ್ಬ ಜಾನಪದ ಮಾಂತ್ರಿಕನ ಪರಿಕಲ್ಪನೆಯ ಪ್ರಮುಖ ಆಚರಣೆಯಾಗಿದೆ ಆಟಿಕಳಂಜ. ಜನಸಾಮಾನ್ಯನಿಗೆ, ದನ ಕರುಗಳಿಗೆ, ಬೆಳೆಗಳಿಗೆ, ಬರುವ ಮಾರಿಯನ್ನು ನೀಗಲು ದೇವರು ಕಳುಹಿಸುವ ಒಂದು ದೈವಿಕ ಶಕ್ತಿ ಆಟಿ ಕಳಂಜ ಎಂಬುದು ತುಳುನಾಡಿನ ಜನತೆಯ ನಂಬಿಕೆ. ಮನೆಮನೆಗೂ ಬರುವ ಆಟಿ ಕಳಂಜ ಅರಿಶಿಣ, ಉಪ್ಪು, ಮಸಿಗಳನ್ನು ಮಂತ್ರಿಸಿ ಅಂಗಳದ ನಾಲ್ಕು ಬದಿಗಳಿಗೂ ಬಿಸಾಡಿ ಮಾರಿ ಕಳೆದು ಜನರಿಗೆ ಸಾಂತ್ವನ ನೀಡುತ್ತಾನೆ.

ಆಟಿ ತಿಂಗಳ ಕಷ್ಟ ಕೋಟಲೆಗಳನ್ನು ಹೇಳುವುದರ ಜತೆಗೆ ಜನರಲ್ಲಿ ಅವುಗಳನ್ನು ಎದುರಿಸುವ ಆತ್ಮ ವಿಶ್ವಾಸವನ್ನು ಹುಟ್ಟಿಸುವ ಪ್ರಯತ್ನದ ಈ ಆಟಿಕಳಂಜನ ಕುಣಿತವನ್ನು ನೋಡಿಕೊಂಡು ಜನ ತಮ್ಮ ದುಸ್ಥಿತಿಯನ್ನು ಮರೆಯುತ್ತಾರೆ. ಈ ಕುಣಿತದ ಹಾಡಿನಲ್ಲಿ ಕಳೆಂಜನ ಹುಟ್ಟು, ರೋಗ ರುಜಿನಗಳ ಪರಿಹಾರ, ಸಂಕಷ್ಟದ ಸಮಯದಲ್ಲಿ ಹೇಗೆ ಧೈರ್ಯದಿಂದಿರಬೇಕು, ಮಾರಿ ಓಡಿಸುವ ರೀತಿ ರೀವಾಜುಗಳನ್ನು ವರ್ಣಮಯವಾಗಿ ವಿವರಿಸಲಾಗುತ್ತದೆ.

 

Courtecy : ಉದಯವಾಣಿ, Beauty of Tulunad

 

Aati Kalanja, ಆಟಿಕಳಂಜ : ಸುರಿಯುವ ಮಳೆಯ ಆಟಿ(ಆಷಾಢ) ತಿಂಗಳೆಂದರೆ ತುಳುನಾಡ ಜನತೆ ಮನೆಯಿಂದ ಹೊರಬರಲೂ ಆಗದಂತಹ ಕಾಲ ಎಂಬುದು ವಾಡಿಕೆ. ಈ ಮಾಸದಲ್ಲಿ ಆಟಿ ಕಳಂಜ ಕುಣಿತ ತುಳುನಾಡಿನ ವಿಶೇಷ. ಆಟಿ ತಿಂಗಳಿನಲ್ಲಿ ಕೂಡಿಟ್ಟ ಧವಸಧಾನ್ಯಗಳು ಮುಗಿಯುವ ಕಾರಣ, ಲಭ್ಯ ಸಸ್ಯಮೂಲವೇ ಆಹಾರವಾಗುತ್ತದೆ. ಇದೇ ಸಂದರ್ಭದಲ್ಲಿ ಕಾಲಿಡುವ ಶೀತ, ಕೆಮ್ಮು ಹಾಗೂ ಜ್ವರಬಾಧೆ, ಸೊಳ್ಳೆಕಾಟ ಜನತೆಯನ್ನು ಕಂಗೆಡಿಸುತ್ತವೆ. ಇದನ್ನೆಲ್ಲಾ ನಿವಾರಿಸಲು ಆಟಿ ಕಳಂಜ ಬರುತ್ತಾನೆ ಎಂಬ ನಂಬಿಕೆ ಇದೆ.ಆಟಿಕಳಂಜ ಹೆಸರೇ ಸೂಚಿಸುವಂತೆ ಆಟಿ ತಿಂಗಳಿನಲ್ಲಿ ನಡೆಯುವ …

Review Overview

User Rating: 4.9 ( 1 votes)
0

About Pavanesh D

Pavanesh D

Leave a Reply